Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಕನ್ನಡಪರ ಸಂಘಟನೆಗಳು ರಾಜ್ಯೋತ್ಸವ ಸರಳ ಆಚರಣೆಗೆ ನಿರ್ಧಾರ

ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಕನ್ನಡಪರ ಸಂಘಟನೆಗಳು ರಾಜ್ಯೋತ್ಸವ ಸರಳ ಆಚರಣೆಗೆ ನಿರ್ಧಾರ

ಬೆಳಗಾವಿ:- ಜಿಲ್ಲೆಯಲ್ಲಿ ರಾಜ್ಯೋತ್ಸವ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ; ಆದರೆ ಪ್ರವಾಹದಿಂದ ಆಗಿರುವ ಜೀವಹಾನಿಯನ್ನು ಗಮನದಲ್ಲಿರಿಸಿಕೊಂಡು ಸ್ವಯಂಪ್ರೇರಣೆಯಿಂದ ಸರಳ ರೀತಿಯಿಂದ ರಾಜ್ಯೋತ್ಸವ ಆಚರಿಸೋಣ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯೋತ್ಸವಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದರೆ ಜಿಲ್ಲೆಯಲ್ಲಿ ಪ್ರವಾಹದಿಂದ 32 ಜನರ ಜೀವಹಾನಿಯಾಗಿದ್ದು, ಸಾವಿರಾರು ಕೋಟಿ ರೂಪಾಯಿ ಹಾನಿಯಾಗಿದೆ. ಇಂತಹ ಪರಿಸ್ಥಿತಿಯನ್ನು ಅರಿತು ನಾವು ಸ್ವಯಂ ಪ್ರೇರಣೆಯಿಂದ ಕೆಲವು ನಿರ್ಬಂಧ ವಿಧಿಸಿಕೊಂಡು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸೋಣ ಎಂದರು.ಹೋಳಿಗೆ ಊಟ ಬೇಡ; ಡಾಲ್ಬಿಗೆ ಕಡಿವಾಣ: ಜಿಲ್ಲೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ರಾಜ್ಯೋತ್ಸವ ಸಂದರ್ಭದಲ್ಲಿ ಹೋಳಿಗೆ ಊಟ ಬೇಡ. ಡಾಲ್ಬಿಗೆ ಕಡಿವಾಣ ಹಾಕಿ ಜನಪದ ಕಲಾತಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡು ಎಲ್ಲ ಕನ್ನಡಪರ ಸಂಘಟನೆಗಳ ಆಶಯದಂತೆ ಸರಳ ಹಾಗೂ ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಿಸೋಣ ಎಂದು ತಿಳಿಸಿದರು. ನಮ್ಮೊಂದಿಗೆ ಇರುವ ಯಾರ ಭಾವನೆಗಳಿಗೂ ಧಕ್ಕೆ ತಾರದಂತೆ ಕನ್ನಡ ರಾಜ್ಯೋತ್ಸವ ಆಚರಿಸೋಣ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.ಸರಳ ಆಚರಣೆಗೆ ಸಂಘಟನೆಗಳ ಸಹಮತ: ಜಿಲ್ಲೆಯಲ್ಲಿ ಭೀಕರ ಪ್ರವಾಹದಿಂದ ತೀವ್ರ ಹಾನಿಯಾಗಿರುವ ಹಿನ್ನೆಲೆಯಲ್ಲಿ ವೈಭವದ ರಾಜ್ಯೋತ್ಸವಕ್ಕೆ ಮನಸಾಕ್ಷಿ ಒಪ್ಪುವುದಿಲ್ಲ; ಆದರೆ ಅರ್ಥಪೂರ್ಣವಾಗಿ ಸರಳ ರೀತಿಯಲ್ಲಿ ಆಚರಿಸೋಣ ಎಂದು ಕನ್ನಡ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.ಅಂಗಡಿ ಮುಂಗಟ್ಟುಗಳ ಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಹಾಕಿಸಲು ಪಾಲಿಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು. ಮಾಜಿ ಮಹಾಪೌರ ಸಿದ್ದನಗೌಡ ಪಾಟೀಲ ಅವರು ಮಾತನಾಡಿ, ಸಂತ್ರಸ್ತರು ಸಂಕಷ್ಟದಲ್ಲಿರುವುದರಿಂದ ಸರಳ ರೀತಿಯಲ್ಲಿ ರಾಜ್ಯೋತ್ಸವ ಆಚರಿಸಲು ಸಹಮತ ವ್ಯಕ್ತಪಡಿಸಿದರು.ಕನ್ನಡ ಸಂಘಟನೆಯ ಜಿಲ್ಲಾಧ್ಯಕ್ಷ ಮಹದೇವ ತಳವಾರ ಮಾತನಾಡಿ, ಬೆಳಗಾವಿ ಗಡಿ ಜಿಲ್ಲೆಯಾಗಿರುವುದರಿಂದ ರಾಜ್ಯೋತ್ಸವ ಆಚರಿಸೋಣ. ಅದ್ಧೂರಿತನ ಬೇಡ; ಹಣ ಸಂಗ್ರಹಿಸಿ ಸಂತ್ರಸ್ತರಿಗೆ ನೀಡಲು ನಾವೆಲ್ಲರೂ ಮುಂದಾಗಬೇಕಿದೆ.‌ ಕನ್ನಡ ಅನುಷ್ಠಾನ ಮತ್ತು ಕನ್ನಡಪರ ಸಂಘಟನೆಗಳ ಕುಂದುಕೊರತೆಗಳನ್ನು ಆಲಿಸಲು ಪ್ರತ್ಯೇಕ ಸಭೆಯನ್ನು ನಡೆಸಬೇಕು ಎಂದು ಮನವಿ ಮಾಡಿಕೊಂಡರು. ಶ್ರೀನಿವಾಸ್ ತಾಳೂರಕರ, ಡಾಲ್ಬಿ ಬಳಕೆ ಸೇರಿದಂತೆ ಅನವಶ್ಯಕ ಖರ್ಚು ಮಾಡದೇ ಅರ್ಥಪೂರ್ಣವಾಗಿ ರಾಜ್ಯೋತ್ಸವ ಆಚರಿಸಲು ಎಲ್ಲರ ಬೆಂಬಲವಿದೆ ಎಂದರು.ಗಡಿಭವನ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಇದನ್ನು ಪುನರುಜ್ಜೀವನಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.ಬಸ್ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೆಸರಿಡಬೇಕು ಎಂದು ತಾಳೂರಕ ಮನವಿ ಮಾಡಿಕೊಂಡರು. ಡಾಲ್ಬಿ ಬದಲು ಜನಪದ ಕಲಾತಂಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬೇಕು; ದಸರಾ ಮಾದರಿಯಲ್ಲಿ ಬೆಳಗಾವಿವರಾಜ್ಯೋತ್ಸವಕ್ಕೆ ವಿಶೇಷ ಅನುದಾನ ಒದಗಿಸಬೇಕು ಮತ್ತು ಕಲ್ಯಾಣ ಕರ್ನಾಟಕ ಮಾದರಿಯಲ್ಲಿ ಚನ್ನಮ್ಮ ಕರ್ನಾಟಕವೆಂದು ಸರ್ಕಾರ ಘೋಷಿಸಬೇಕು ಎಂದು ಮಹಾಂತೇಶ ರಣಗಟ್ಟಿಮಠ ಒತ್ತಾಯಿಸಿದರು.ಸ್ತಬ್ಧಚಿತ್ರ ಹಾಗೂ ರೂಪಕಗಳಿಗೆ ನೀಡುವ ವಾಹನಗಳನ್ನು ಸರಿಯಾದ ಸಮಯಕ್ಕೆ ಒದಗಿಸಬೇಕು ಎಂದು ಭಾವಕಣ್ಣ ಹೇಳಿದರು.ರಾಜ್ಯೋತ್ಸವ ಸರಳ ರೀತಿಯಲ್ಲಿ ಆಚರಿಸಲು ಎಲ್ಲರೂ ಸಹಮತ ವ್ಯಕ್ತಪಡಿಸಿದ್ದು, ಆದಾಗ್ಯೂ ಅನಗತ್ಯ ನಿರ್ಬಂಧ ವಿಧಿಸಬಾರದು ಎಂದು ದೀಪಕ್ ಗುಡಗೇನಟ್ಟಿ ಒತ್ತಾಯಿಸಿದರು. ಪ್ರವಾಹದ ನೆಪವೊಡ್ಡಿ ರಾಜ್ಯೋತ್ಸವ ಕಳೆಗುಂದಿಸುವುದು ಬೇಡ. ಸಂತ್ರಸ್ತರ ಜತೆ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲು ಅನುವು ಮಾಡಿಕೊಡಬೇಕು ಎಂದು ಅನಂತಕುಮಾರ್ ಬ್ಯಾಕೂಡ್ ಹೇಳಿದರು. ಉಪ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಪ್ರತಿಯೊಂದು ಸ್ತಬ್ಧಚಿತ್ರಕ್ಕೆ ಪೊಲೀಸ್ ಭದ್ರತೆ ನೀಡಲಾಗುವುದು. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಕೊನೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ರಾಜ್ಯೋತ್ಸವ ಸಿದ್ಧತೆಗಳನ್ನು ಪ್ರತಿವರ್ಷದಂತೆ ಆಯಾ ಇಲಾಖೆಯ ಅಧಿಕಾರಿಗಳು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಂ ನಸಲಾಪುರೆ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Share

About Site Default

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!