Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಸಾಂಸ್ಕೃತಿ ಸಿರಿ, ಭಾವೈಕ್ಯತೆಯ ಗರಿ ಯರಗುಪ್ಪಿಯ ಮೊಹರಂ ಹಬ್ಬ

ಸಾಂಸ್ಕೃತಿ ಸಿರಿ, ಭಾವೈಕ್ಯತೆಯ ಗರಿ ಯರಗುಪ್ಪಿಯ ಮೊಹರಂ ಹಬ್ಬ

ಧಾರವಾಡ
ಹಬ್ಬ-ಹರಿದಿನಗಳು ಮನುಷ್ಯರನ್ನ ಬೆಸೆಯಬೇಕು. ಸಾರಮಸ್ಯ ಮೂಡಿಸ್ಬೇಕು. ಧರ್ಮಗಳ ಮಧ್ಯೆ ಸಾಮರಸ್ಯ ಬೆಳೆಸೆಯುವ, ದ್ವೇಷ-ಅಸೂಯೆ ಬಿಟ್ಟು ಎಲ್ರನ್ನೂ ಪ್ರೀತಿಸುವಂತೆ ಮಾಡುವ ಹಬ್ಬವನ್ನ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಶತಮಾನಗಳಿಂದಲೂ ಆಚರಿಸಿಕೊಂಡು ಬರ್ಲಾಗ್ತಿದೆ. ಧರ್ಮ ಯಾವುದಾದರೇನು ಅದರ ತಿರುಳು ಒಂದೇ ಅಂತ ಭಾವೈಕ್ಯತೆಯನ್ನ ಸಾರುವ ಮೊಹರಂ ಹಬ್ಬ ಯರಗುಪ್ಪಿ ಗ್ರಾಮದಲ್ಲಿ ನಡೆಯುತ್ತೆ. ಇಡೀ ನಾಡಿನಲ್ಲಿಯೇ ವಿಶೇಷ ಆಚರಣೆಯಿಂದ ಈ ಗ್ರಾಮ ಸಾಮರಸ್ಯವನ್ನ ಬೆಸೆಯುತ್ತಲೇ ಬಂದಿದೆ. ಇದೇ ಸೆಪ್ಟೆಂಬರ್ 22ಕ್ಕೆ ಯರಗುಪ್ಪಿಯಲ್ಲಿ ಮೊಹರಂ ಜಾತ್ರೆ, ತನ್ನಮಿತ್ತ ಈ ಲೇಖನ.
ಹಿಜರಿ ಸಂವತ್ಸರದ ಮೊದಲನೆಯ ತಿಂಗಳೇ ಮೊಹರಂ. ಅರಬ್ಬೀ ಭಾಷೆಯಲ್ಲಿ ಮೊಹರಂ ಅಂದ್ರೇ ನಿಷಿದ್ಧ ಎಂದರ್ಥ. ಇದಕ್ಕೆ ‘ಸೈಯದುಲ್ಲ ಅಸಹರ್ ‘ ಅಂದ್ರೇ ಎಲ್ಲ ತಿಂಗಳ ದೊರೆ ಎನ್ನುತ್ತಾರೆ. ಈ ತಿಂಗಳಲ್ಲಿ ನಡೆದ ಕರ್ಬಲಾ ಕಾಳಗದಲ್ಲಿ ಹಸನ್, ಇಮಾಮಹುಸೇನರು ಹುತಾತ್ಮರಾದ ಕಾರಣದಿಂದ ದುಃಖದಾಯಕವೆಂದು ಗುರುತಿಸಲ್ಪಡುತ್ತಿದೆ.  ಮೊಹರಂ ಆಚರಣೆ ಮೂಲತಃ ಶೋಕಸ್ಥಾಯಿಯಾಗಿದ್ದರೂ ಕಾಲಚಕ್ರದಲ್ಲಿ ತನ್ನ ಮೂಲಭಾವ ಕಳೆದುಕೊಂಡು ಉತ್ಸವದ ರಂಗು ಪಡೆದು ರಂಜಿಸುತ್ತಿದೆ. ಆಂಧ್ರದ ಹೈದರಾಬಾದ್ ನಗರದಲ್ಲಿ ಶೋಕಮೂಲ ಆಚರಣೆ ರೂಢಿಯಲ್ಲಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ, ಜಾತ್ರೆಯಂತೆ ನಡೆದುಕೊಂಡು ಬಂದಿದೆ. ಇದು ಮೊದಲು ‘ಅಮೀರ್ ತೈಮೂಲರಂಗ’ (ಕ್ರಿ.ಶ 1136-1405) ನ ಕಾಲದಲ್ಲಿ ಭಾರತವನ್ನ ಪ್ರವೇಶಿಸಿತು. ತಾಜಿಯಾ ಅಂದ್ರೇ ಡೋಲಿ ತಯಾರಿಸುವ ಪದ್ಧತಿಯನ್ನ ಆರಂಭಿಸಿದ್ದು ‘ಅಮೀರ್ ತೈಮೂಲರಂಗ’ನೇ.. ಕಾಲಗತಿಸಿದಂತೆ ಮೊಹರಂ ರಾಷ್ಟ್ರೀಯ ಹಬ್ಬವಾಯಿತು. 
ಮನುಷ್ಯ ಪ್ರೀತಿ ಇಮ್ಮಡಿಗೊಳಿಸುವ ಯರಗುಪ್ಪಿ ಮೊಹರಂ : 
ಹತ್ತು ದಿನಗಳ ಈ ಆಚರಣೆಯಲ್ಲಿ ಮೊದಲ ದಿನದಂದು ಚಂದ್ರನನ್ನ ನೋಡಿ ಗುದ್ದಲಿ ಹಾಕಿ, ಮಸೀದಿಯ ಮುಂದೆ ಅವಾನಿ ಕುಣಿಕೆಯನ್ನ ತೆಗೆಯಲಾಗುತ್ತದೆ. ಊರ ತುಂಬೆಲ್ಲ ಸಂಭ್ರಮವೋ ಸಂಭ್ರಮ. ಸಕಲ ಧರ್ಮೀಯರೂ ಸಕ್ರೀಯವಾಗಿ ಮೊಹರಂ ಹಬ್ಬದಲ್ಲಿ ಪಾಲ್ಗೊಳ್ಳೋದಷ್ಟೇ ಅಲ್ಲ, ‘ಜಿಯಾರತ್’ ಕೈಗೊಂಡು ಫಕ್ಕೀರರಾಗ್ತಾರೆ. ಎಂಟನೇ ದಿನ ‘ಸಂದಲ್ ರಾತ್ರಿ’ ರಾತ್ರಿ 11 ಗಂಟೆಯ ನಂತರ ಶರಣೆ ಬೀಬಿ ಫಾತೀಮಾ ಮೆರವಣಿಗೆ ನಡೆಯುತ್ತದೆ. ರೈತರು ಚಕ್ಕಡಿ ಎತ್ತನ್ನ ಸಿಂಗರಿಸಿಕೊಂಡು, ಎಣ್ಣೆದೀಪ ಉರಿಸುತ್ತ ಊರ ತುಂಬೆಲ್ಲ ಸುತ್ತುತ್ತಾರೆ. ಯುವಕರ ಹೆಜ್ಜೆಮೇಳ ಹಾಗೂ ಕೋಲಾಟಗಳು ಮೆರವಣಿಗೆಗೆ ಮತ್ತಷ್ಟು ರಂಗನ್ನ ತರುತ್ತವೆ. 9ನೇ ದಿನ ‘ಖತಲ್ ರಾತ್ರಿ’ ಅಂದು ಮಸೀದಿಗಳಲ್ಲಿ ಡೋಲಿಗಳನ್ನ ವಿದ್ಯುದೀಪಗಳಿಂದ ಅಲಂಕರಿಸುತ್ತಾರೆ. ‘ಅಳ್ಳಳ್ಳಿ ಭವ್ವಾ’ ಮತ್ತು ‘ಹುಲಿ ವೇಷಧಾರಿಗಳು’ ತಮ್ಮ ಹರಕೆ ಮತ್ತು ಸೇವೆ ಸಲ್ಲಿಸೋದು ಮೊದಲಿನಿಂದ ನಡೆದುಕೊಂಡು ಬಂದಿರೋ ವಾಡಿಕೆ.  ಭಕ್ತರು ಎಡಿಗಳನ್ನ ಹಿಡಿದು ಬಾಜಾ ಭಜಂತ್ರಿ ಮತ್ತು ಹಲಿಗೆಯ ಸದ್ದಿನ ಜತೆಗೆ ಮಸೀದಿಗೆ ಆಗಮಿಸಿ ಅಲಾವಿ ಕುಣಿಕೆಗೆ ಐದು ಸುತ್ತು ಹಾಕುತ್ತಾರೆ. ಡೋಲಿ-ಕೈದೇವರ ಎದುರು ‘ಹುಸೇನ್ ಹುಸೇನ್ ದೋಸ್ತರ್ ಹೋದೀನ್’ ಎಂದು ಕೂಗುತ್ತಾ ದೀನ್ ಜಗಾಯಿಸ್ತಾರೆ. 10ನೇ ದಿನ ಮೊಹರಂ ಹಬ್ಬದ ಕೊನೆಯ ದಿನ. ಅಂದು ಬೆಳಗಿನ ನಾಲ್ಕು ಗಂಟೆಯ ಹೊತ್ತಿಗೆ ಯರಗುಪ್ಪಿಯ ಮೂರು ಡೋಲಿಗಳು ಹಾಗೂ ಕೈದೇವರು ಮೆರವಣಿಗೆ ಹೊರಟು ಊರಿನಲ್ಲಿ ಸುತ್ತಾಡಿ 8 ಗಂಟೆಯ ಹೊತ್ತಿಗೆ ವಿರಮಿಸುತ್ತವೆ. 10 ಗಂಟೆಯ ಹೊತ್ತಿಗೆ ದೀನ್ ಜಗಾಯಿಸಿ ಅಲಾವಿ ಕುಣಿ ಮುಚ್ಚಿ ಬಾರಿ ಕಟ್ಟೆ ಚುಚ್ಚಿ ನೀರು ಚುಮುಕಿಸಿ ಫಾತೀಹಾ ಮಾಡ್ತಾರೆ. ಡೋಲಿ ಹಾಗೂ ಕೈದೇವರು ಪಕ್ಕದ ಊರಾದ ಚಿಕ್ಕನರ್ತಿಯ ಎರಡು ಡೋಲಿ ನಿಲ್ಲಿಸಿ ಫಾತೀಹಾ ಮಾಡಿ ಆಮಂತ್ರಣ ವಿಧಿ ನೆರವೇರಿಸುತ್ತಾರೆ. ಊರ ಕೆರೆಯ ವಿಶಾಲ ಮೈದಾನದಲ್ಲಿ ಐದು ಡೋಲಿಗಳನ್ನು ಮಂಚಹಾಕಿ ಕೂಡಿಸುತ್ತಾರೆ. ಈ ಉತ್ಸವವನ್ನು ನೋಡಲು ರಾಜ್ಯವಲ್ಲದೇ ಬೇರೆ ರಾಜ್ಯದ ಭಕ್ತರು ಆಗಮಿಸಿ ಕೃತಾರ್ಥರಾಗ್ತಾರೆ. 
ಎಲ್ಲರ ಮನಸೂರೆಗೊಳಿಸುವ ಜಾನಪದ ಕಲೆಗಳ ಸಿರಿವಂತಿಕೆ  : 
ಮೊಹರಂ ಶೋಕಾಚರಣೆ ಅನ್ನೋದನ್ನ ಐತಿಹ್ಯವೇ ಸಾರಿ ಹೇಳುತ್ತೆ. ಆದ್ರೇ, ಕಾಲಾಂತರದಲ್ಲಿ ಶೋಕಾಚರಣೆಯೇ ಸಂಭ್ರಮ ಸ್ವರೂಪ ಪಡ್ಕೊಂಡಿದೆ. ಮೊಹರಂ ಹಬ್ಬವೆಂದ್ರೇ ಹೆಜ್ಜೆಮೇಳ ಇರಲೇಬೇಕು. ಅದರಲ್ಲೂ ಅಲಾವಿ ಕುಣಿತ ಇರದಿದ್ರೇ ಈ ಹಬ್ಬ ಸಂಪೂರ್ಣವಾಗೋದೇ ಇಲ್ಲ. ಯರಗುಪ್ಪಿ ಜಾತ್ರೆಯಲ್ಲಂತೂ ತಲೆತಲಾಂತರದಿಂದಲೂ ಜಾನಪದ ಸೊಗಡನ್ನ ಹೆಚ್ಚಿಸಿಕೊಳ್ತಾ ಬಂದಿರೋದು ಇಲ್ಲಿನ ವಿಶೇಷ. ಜಾತ್ರೆಯ ಕೊನೆಯ ದಿನ 3 ಗಂಟೆ ಹೊತ್ತಿಗೆ ಊರ ಕೆರೆಯ ಮೈದಾನದಲ್ಲಿ ಜನಪದ ಆಟೋಟಗಳ ಪ್ರಕಾರಗಳಾದ ಹೆಜ್ಜೆಮೇಳ, ಕೋಲುಮೇಳ, ಸ್ವೇಟರ್ ಕುಣಿತ, ಕಡೆಗೋಲು ಕುಣಿತ, ಜತ್ತಿಗೆ ಕುಣಿತ, ಮುಳ್ಳು ಹೆಜ್ಜೆ ಕುಣಿತಗಳ ಸ್ಪರ್ಧೆಗಳನ್ನ ಏರ್ಪಡಿಸಲಾಗುತ್ತೆ. ಸಾಹಸ ಕ್ರೀಡೆ ಕೂಡ ಇಲ್ಲಿ ನಡೆಯುತ್ತೆ. ಪ್ರತಿ ವರ್ಷ ಜಾತ್ರೆಗೆ ಬರೋರರ ಸಂಖ್ಯೆ ಹೆಚ್ಚಿಸ್ತಿರೋದೇ, ಎಲ್ರನ್ನೂ ಸೆಳೆಯುತ್ತಿರೋದೇ ಇಲ್ಲಿ ಕೊನೆಯ ದಿನ ನಡೆಯೋ ಸಾಂಸ್ಕೃತಿಕ ಕಲೆಗಳ ಸ್ಪರ್ಧೆಗಳು. ಹೆಜ್ಜೆಮೇಳದಲ್ಲಿ ಅದ್ಭುತ ಪ್ರದರ್ಶನ ನೀಡುವ 3 ತಂಡಗಳಿಗೆ ಮೊದಲ, ದ್ವಿತೀಯ ಹಾಗೂ ತೃತೀಯ ಬಹುಮಾನವಿರುತ್ತೆ. ಸಾವಿರ ರೂ. ನಗದು, ಪ್ರಶಸ್ತಿ ಫಲಕ ಜತೆಗೆ ಬಂಗಾರವನ್ನೂ ಗೆದ್ದ ತಂಡಗಳಿಗೆ ನೀಡಲಾಗುತ್ತೆ. ಆದ್ರೇ, ಇನ್ನಿತರೇ ಸಾಹಸ ಪ್ರದರ್ಶನ ತೋರಿದ ಜಟ್ಟಿಗಳಿಗೂ ಪ್ರಶಂಸೆ, ಸನ್ಮಾನ ಕೂಡ ಮಾಡ್ಲಾಗುತ್ತೆ. ವಿವಿಧ ಜಿಲ್ಲೆಗಳಿಂದ 50ಕ್ಕೂ ಹೆಚ್ಚು ಹೆಜ್ಜೆಮೇಳದ ಕಲಾತಂಡಗಳು ಇದರಲ್ಲಿ ಭಾಗವಹಿಸ್ತವೆ.  ಪ್ರಸ್ತುತ ಸನ್ನಿವೇಶಗಳಿಗೆ ತಕ್ಕಂತೆಯೇ ಹೆಜ್ಜೆಮೇಳಕ್ಕಾಗಿ ಹಾಡು ರಚಿಸಲಾಗಿರುತ್ತೆ. ಪ್ರತಿ ತಂಡಕ್ಕೂ ಇಂತಿಷ್ಟೇ ಸಮಯವೆಂದು ನಿಗದಿಪಡಿಸಲಾಗಿರುತ್ತೆ. ಕೊಟ್ಟಿರೋ ಟೈಮ್ ನಲ್ಲಿಯೇ ತಮ್ಮ ಪ್ರತಿಭೆಯನ್ನ ತೋರ್ಪಡಿ, ಯಾವ ತಂಡ ಪ್ರೇಕ್ಷಕರ ಹಾಗೂ ನಿರ್ಣಾಯಕರ ಮನಸ್ಸು ಗೆಲ್ಲುತ್ತೋ ಅವೇ ತಂಡಗಳಿಗೆ ಪ್ರಶಸ್ತಿ ಮುಡಿಗೇರುತ್ತೆ. 
ಕರ್ನಾಟಕದಲ್ಲಿಯೇ ಯರಗುಪ್ಪಿ ಮೊಹರಂ ಹಬ್ಬದ ಆಚರಣೆ ಮಾದರಿ :
ಯರಗುಪ್ಪಿಯಲ್ಲಿ ಬರೀ ಸೇರುವ ಆರು ಡೋಲಿಗಳು ಒಂದೇ ಊರಿಗೆ ಸೇರಿಲ್ಲ. ಚಿಕ್ಕನರ್ತಿ, ಯರಿನಾರಾಯಣಪುರ ಗ್ರಾಮವೂ ಸೇರಿ ಯರಗುಪ್ಪಿಯಲ್ಲಿ ನಡೆಯೋ ಕೊನೆ ದಿನದ ಜಾತ್ರೆಯಲ್ಲಿ ಆರು ಡೋಲಿಗಳು ಒಂದೇ ಕಡೆಗೆ ಸೇರೋದನ್ನ ನೋಡೋದೇ ಮನಮೋಹಕವಾಗಿರುತ್ತೆ. ಸಂಜೆ 6 ಗಂಟೆ ವೇಳೆಗೆ ಪಕ್ಕದ ಊರು ಯರಿನಾರಾಯಣಪುರದ ಕಳಸದ ಡೋಲಿ ಯರಗುಪ್ಪಿಗೆ ಬರುತ್ತದೆ. ಈ ದೃಶ್ಯವಂತೂ ಎಲ್ರನ್ನೂ ಮಂತ್ರಮುಗ್ಧಗೊಳಿಸುತ್ತೆ. ಈ ರೀತಿ ಒಂದೇ ಕಡೆಗೆ ಆರು ಡೋಲಿಗಳು ಸೇರೋದು ಇಡೀ ಕರ್ನಾಟಕದಲ್ಲಿಯೇ ಚರಿತಾರ್ಹವಾಗಿದೆ. ಸಂಜೆ 7 ಗಂಟೆಯ ಹೊತ್ತಿಗೆ ಡೋಲಿಗಳು ಮತ್ತು ಕೈದೇವರು ಊರಿನ ಪಶ್ಚಿಮ ದಿಕ್ಕಿಗೆ ಹರಿಯುವ ಬೆಣ್ಣಿಹಳ್ಳಕ್ಕೆ ತೆರಳುತ್ತವೆ. ಆಗ ಅಲ್ಲಿ ಮುಳ್ಳೊಳ್ಳಿ ಡೋಲಿಯೂ ಬಂದು ನಿಂತಿರುತ್ತೆ.  ನಾಲ್ಕು ಊರಿನ 7 ಡೋಲಿಗಳು ಬೆಣ್ಣಿಹಳ್ಳದ ಮೇಲೆ ಮಿಲನವಾಗುತ್ತವೆ. ಫಾತೀಹಾ ಮಾಡಿ ದೇವರುಗಳ ಮುಖ ತೊಳೆದು,  ಡೋಲಿಗಳನ್ನ ಬಿಚ್ಚಿಡ್ತಾರೆ. ಡೋಲಿಗಳ ಮುಖಕ್ಕೆ ಬಿಳಿಬಟ್ಟೆಯನ್ನ ಕಟ್ಟಿ ಹಿಂದೂ ಮುಸ್ಲಿಮರಿಗೆ ತಬರುಕ್ ವಿತರಿಸ್ತಾರೆ. ಈ ಸಾಂಪ್ರದಾಯಿಕ ಪದ್ಧತಿ ಮುಗಿದ್ಮೇಲೆ ನಂತರ ಡೋಲಿಗಳನ್ನ ಹೊತ್ತು ಅಲ್ವಿದಾ ಹಾಡುತ್ತಾ ಮರಳುತ್ತಾರೆ. ಈ ಮೂಲಕ ಹತ್ತು ದಿನದ ಹಬ್ಬಕ್ಕೆ ತೆರೆ ಬೀಳುತ್ತದೆ. ವಿಶಿಷ್ಟ ಖಾದ್ಯ ಮಾದಲಿ-ಚೊಂಗೆ ತಿನ್ನದೇ ಹಬ್ಬ ಕಂಪ್ಲೀಟಾಗೋದಿಲ್ಲ : 
ಉತ್ತರಕರ್ನಾಟಕದ ಬಲು ಜನಪ್ರಿಯ ಖಾದ್ಯ ಮಾದಲಿ. ಇದು ಮೊಹರಂ ಹಬ್ಬದ ಮತ್ತೊಂದು ಸ್ಪೆಷಲ್. ಗೋಧಿ ಹಿಟ್ಟು, ರವೆಯಿಂದ ದಪ್ಪನೆಯ ಚಪಾತಿ ರೀತಿಯೇ ಕೆಂಬಣ್ಣ ಬರುವವರೆಗೂ ಬೇಯಿಸಲಾಗುತ್ತೆ. ಹೀಗೆ ತಯಾರಿಸಿದ ಚಪಾತಿಯನ್ನ ಸಣ್ಣಗೆ ಮುರಿದು ಪುಡಿ ಮಾಡ್ತಾರೆ. ಬಳಿಕ ಅದನ್ನ ಕುಟ್ಟುತ್ತಾರೆ. ಆದ್ರೀಗ ಮಿಕ್ಸಿಯಲ್ಲೂ ಹಾಕೋದೇ ಹೆಚ್ಚು. ಇದೇ ಪುಡಿಗೆ ಬೆಲ್ಲ, ಏಲಕ್ಕಿ, ಶುಂಟಿ, ತುರಿದ ಕೊಬ್ಬರಿ, ಪುಟಾಣಿ, ಗಸಗಸೆ ಎಲ್ಲ ಸೇರಿಸಿ ಮಿಶ್ರಣ ಮಾಡಿದ್ರೇ ಆಗ ತಯಾರಾಗೋದೇ ಮಾದಲಿ. ತುಪ್ಪವೋ ಇಲ್ಲ ಹಾಲಿನಲ್ಲಿ ಕಲಿಸಿ ತಿಂದ್ರೇ ಆಹಾಹಾ.. ತಿಂದವರೇ ಬಲ್ಲರು ಅದರ ರುಚಿಯನ್ನ. ಚೊಂಗೆ ಕೂಡ ಮೊಹರಂ ಹಬ್ಬದಲ್ಲಿ ಮಾಡೋ ಮತ್ತೊಂದು ಜನಪ್ರಿಯ ಸಿಹಿ ತಿನಿಸು. ಪುಟಾಣಿ ಪುಡಿಯನ್ನ ಬೆಲ್ಲದೊಂದಿಗೆ ಕಲಿಸಲಾಗುತ್ತೆ. ಈ ಹಿಟ್ಟಿಗೆ ಹುರಿದ ಗಸಗಸೆ ಮತ್ತು ಒಣ ಕೊಬ್ಬರಿ ತುರಿ, ಏಲಕ್ಕಿ ಅಥವಾ ಶುಂಠಿ ಪುಡಿ ಸೇರಿಸಿ ಇವೆಲ್ಲ ಮಿಶ್ರಣ ಮಾಡ್ತಾರೆ. ಗೋಧಿಹಿಟ್ಟನ್ನ ಚಪಾತಿ ಹದಕ್ಕೆ ಕಲಿಸಿ, ಹದಗೊಳಿಸ್ತಾರೆ. ಅದನ್ನ ಚೊಂಗೆ ಮಣೆ ಮೇಲೆ ಚಿಕ್ಕ ಚಪಾತಿ ತರದ ಚೊಂಗೆಗಳನ್ನ ಎಣ್ಣೆ ಹಾಕಿ ಲಟ್ಟಿಸಿಕೊಳ್ತಾರೆ. ಇದನ್ನ ಹಂಚಿನಲ್ಲಿ ಬೇಯಿಸಲಾಗುತ್ತೆ. ಅದು ಬೆಂದಾಗ ತುಪ್ಪ ಸವರಿ, ಪುಟಾಣಿ ಮಿಶ್ರಣ ಹಾಕಿದ್ರೇ ಸಾಕು ಎಲ್ರ ಬಾಯಲ್ಲೂ ನೀರೂರುತ್ತೆ. ಇವೆರಡು ಖಾದ್ಯಗಳು ಇಲ್ಲದಿದ್ರೇ ಮೊಹರಂ ಕಂಪ್ಲೀಟಾಗೋದೇ ಇಲ್ಲ. 
ಸಂತ ಶಿಶುವಿನಹಾಳದ ಷರೀಪರಿಗೂ ಯರಗುಪ್ಪಿಗೂ ನಂಟು :
ಮೊಹರಂದ ಹಬ್ಬಕ್ಕೂ ಕಳಸದ ಗೋವಿಂದಭಟ್ಟರ ಶಿಷ್ಯ ಸಂತ ಶಿಶುವಿನಹಾಳದ ಶರೀಫರಿಗೂ ಅವಿನಾಭಾವ ಬೆಸುಗೆಿಯಿದೆ. ಗೋವಿಂದಭಟ್ಟರು ದೇಹತ್ಯಾಗ ಮಾಡುವ ಮೊದಲು ಶರೀಷರು ಇದೇ ಯರಗುಪ್ಪಿಯಲ್ಲಿ ಅಲಾವಿ ಕುಣಿತ ಕಲಿಸ್ತಾಯಿದ್ರಂತೆ. ಆಗ ಭಟ್ಟರು ಲೋ ಶರೀಫಾ, ಎಲ್ಲಿದೆಯೋ ಅಂತ ಒಂದು ಕೂಗು ಹಾಕಿದ್ರಂತೆ. ಹೆಜ್ಜೆ ಕುಣಿತ ಕಲಿಸ್ತಿದ್ದ ಸಂತ ಶರೀಫರು ಇದೇ ಯರಗುಪ್ಪಿಯಿಂದಲೇ ಓಡೋಡೆ ಗುರುವನ್ನ ಸೇರಿದ್ರಂತೆ. ಹಾಗಾಗಿಯೇ ಈ ಊರು ಐತಿಹ್ಯ ಪಡೆದಿದೆ. ಜತೆಗೆ ಹೆಜ್ಜೆಮೇಳಗಳಲ್ಲೂ ಶರೀಫರ ಕುರಿತ ಹಾಡುಗಳು ಜಾತ್ರೆಯಲ್ಲಿ ಕಿವಿಗೆ ಇಂಪನ್ನ, ಕಣ್ಣಿಗೆ ರಸದೌತಣ ನೀಡ್ತವೆ. 
ಧರ್ಮ, ಮನುಷ್ಯತ್ವ, ಭಾವೈಕ್ಯತೆ ಬೆಸೆಯುವ ಹಬ್ಬ ಮೊಹರಂ :
ಮೊಹರಂ ಹಬ್ಬ ಮುಸ್ಲಿಮರಿಗಿಂತಲೂ ಹೆಚ್ಚಾಗಿ ಎಲ್ಲ ಧರ್ಮದವರೂ ಇದನ್ನ ಆಚರಿಸ್ತಾ ಬಂದಿದಾರೆ. ಹಾಗಾಗಿಯೇ ಇದು ಶೋಕಾಚರಣೆಯೇ ಮುಂದೆ ಸಂಭ್ರಮದ ಸ್ವರೂಪ ಪಡೆದುಕೊಳ್ತಾ ಬಂದಿದೆ. ಈಗಲೂ ಉತ್ತರಕರ್ನಾಟಕದ ಎಷ್ಟೋ ಊರುಗಳಲ್ಲಿ ಮುಸ್ಲಿಮರೇ ಇರದಿದ್ರೂ ಅಲ್ಲೆಲ್ಲ ಈ ಹಬ್ಬವನ್ನ ತುಂಬ ಅಚ್ಚುಕಟ್ಟಾಗಿಯೇ ಆಚರಿಸ್ತಾರೆ. ಧರ್ಮಗಳನ್ನ, ಮನುಷ್ಯರನ್ನ, ಮಾನವೀಯತೆಯನ್ನ ಹೆಚ್ಚಿಸೋ ಯರಗುಪ್ಪಿ ಮೊಹರಂ ಹಬ್ಬ ಭಾವೈಕ್ಯತೆಯನ್ನ ನಾಡಿಗೆ ಸಾರಿ ಸಾರಿ ಹೇಳ್ತಿದೆ. 
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ಈ ಸಾರಿ ಸೆಪ್ಟೆಂಬರ್ 22ಕ್ಕೆ ಮೊಹರಂ ಕೊನೆಯ ದಿನ. ಅದೇ ದಿನ ಯರಗುಪ್ಪಿಯಲ್ಲಿ ಜಾತ್ರೆಯಿರುತ್ತೆ. ಈ ಸಾರಿಯೂ 50ಕ್ಕೂ ಹೆಚ್ಚು ತಂಡಗಳು ಹೆಜ್ಜೆಮೇಳ ಸ್ಪರ್ಧೆಯಲ್ಲಿ ಪಾಲ್ಗೊಳ್ತಿದ್ದು, ಬಹುಮಾನವಾಗಿ ಬಂಗಾರವನ್ನೂ ಕೂಡಲಾಗುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಇಡೀ ನಾಡಿನಲ್ಲಿ ಸೆಪ್ಟೆಂಬರ್ 21ಕ್ಕೆ ಮೊಹರಂ ಕೊನೆಯ ದಿನವಿದ್ರೇ, ಯರಗುಪ್ಪಿ ಗ್ರಾಮದಲ್ಲಿ ಒಂದು ದಿನ ತಡವಾಗಿ ಅಂದ್ರೇ ಸೆಪ್ಟೆಂಬರ್ 22ಕ್ಕೆ ಇಲ್ಲಿ ಜಾತ್ರೆ ನಡೆಯಲಿದೆ. 

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!