Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಬೆಳಗಾವಿ / ಎಸ್.ಡಿ.ಆರ್.ಎಫ್. ಬಲಪಡಿಸಲು 20 ಕೋಟಿ ರೂ. ಅನುದಾನ: ಬೊಮ್ಮಾಯಿ.

ಎಸ್.ಡಿ.ಆರ್.ಎಫ್. ಬಲಪಡಿಸಲು 20 ಕೋಟಿ ರೂ. ಅನುದಾನ: ಬೊಮ್ಮಾಯಿ.

ಬೆಳಗಾವಿ: ತುರ್ತು ಸಂದರ್ಭಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಎಸ್.ಡಿ.ಆರ್.ಎಫ್. ಬಲಪಡಿಸಲು ೨೦ ಕೋಟಿ ಅನುದಾನ ಒದಗಿಸಲು ಸಚಿವಸಂಪುಟ ಸಭೆ ಅನುಮೋದನೆ ನೀಡಿದೆ.
ಎನ್.ಡಿ.ಆರ್.ಎಫ್. ಮಾದರಿಯಲ್ಲಿ ಸಿಬ್ಬಂದಿ ನೇಮಕ, ತರಬೇತಿ, ಸಾಧನ-ಸಲಕರಣೆಗಳನ್ನು ಒದಗಿಸಲಾಗುವುದು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಗ್ನಿಶಾಮಕ ಮತ್ತು ತುರ್ತುಸೇವೆಗಳ ನಿಪ್ಪಾಣಿಯ ಅಗ್ನಿಶಾಮಕ ಠಾಣೆಯ ನೂತನ ಕಟ್ಟಡ ಹಾಗೂ ಸಿಬ್ಬಂದಿಯ ವಸತಿಗೃಹಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಚಿಕ್ಕೋಡಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯನ್ನು ಶೀಘ್ರದಲ್ಲೇ ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.
ಅದೇ ರೀತಿ ನಿಪ್ಪಾಣಿಯ ಮೂರು ಪೊಲೀಸ್ ಠಾಣೆಗಳ ನೂತನ ಕಟ್ಟಡ ನಿರ್ಮಿಸಲು ಮುಂದಿನ ಆಯವ್ಯಯ ಸಂದರ್ಭದಲ್ಲಿ ಅನುದಾನ ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿರುವ ಶೇ.೬೦ ರಷ್ಟು ಸಿಬ್ಬಂದಿಗೆ ವಸತಿಗೃಹ ಕಲ್ಪಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಶೇ.೮೦ ಸಿಬ್ಬಂದಿಗೆ ವಸತಿಗೃಹ ಒದಗಿಸುವುದು ಸರ್ಕಾರದ ಗುರಿ.
ಪೊಲೀಸ್ ಸುಧಾರಣೆ ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರದ ನೆರವಿನಿಂದ ಎಲ್ಲ ಸೌಲಭ್ಯ ಒದಗಿಸಲಾಗುವುದು.
ಜನಸ್ನೇಹಿ ಠಾಣೆ ನಿರ್ಮಾಣ ಮಾಡಲಾಗುವುದು.

ದೂರು ದಾಖಲಿಸಲು ಸೂಚನೆ:ಠಾಣೆಗೆ ಯಾರೇ ಸಾರ್ವಜನಿಕರು ದೂರು ನೀಡಲು ಬಂದಾಗ ಕಡ್ಡಾಯವಾಗಿ ದೂರು ದಾಖಲಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ದಾಖಲಾಗುವ ಪ್ರತಿಯೊಂದು ಪ್ರಕರಣವೂ ನಿಗದಿತ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಬೇಕು. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರ ಜತೆ ರಾಜೀ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಗಡಿ ಜಿಲ್ಲೆಗಳಲ್ಲಿ ನಡೆಯಬಹುದಾದ ಮಾದಕ ವಸ್ತುಗಳ ಸಾಗಾಣಿಕೆ ಮತ್ತು ಮಾರಾಟ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ಸೂಚನೆ ನೀಡಿದ್ದೇನೆ.
ಸೈಬರ್ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಆದ್ಯತೆ ನೀಡಿ ಎಲ್ಲ ಜಿಲ್ಲೆಗಳಲ್ಲಿ ಸೈಬರ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ.
ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರ, ವಾಹನ ಮತ್ತಿತರ ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ.
ಪೊಲೀಸ್, ಅಗ್ನಿಶಾಮಕ, ಅಪಘಾತ ಮತ್ತಿತರ ತುರ್ತು ಸಂದರ್ಭಗಳಲ್ಲಿ ೧೧೨ ದೂರವಾಣಿ ಸಂಖ್ಯೆಯನ್ನು ವ್ಯವಸ್ಥೆ ಮಾಡಲಾಗಿದೆ.
ರಾಜ್ಯಮಟ್ಟದಲ್ಲಿ ಕರೆ ನಿಯಂತ್ರಣ ಕೊಠಡಿ ಕಾರ್ಯನಿರ್ವಹಿಸಲಿದ್ದು, ಎಲ್ಲ ತುರ್ತು ಸೇವೆಗಳನ್ನು ಒಂದೇ ದೂರವಾಣಿ ಸಂಖ್ಯೆಯಡಿ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಇದಕ್ಕೂ ಮುಂಚೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಅವರು, ಗಡಿಭಾಗದ ನಿಪ್ಪಾಣಿಯಲ್ಲಿ ಅಗ್ನಿಶಾಮಕ ಠಾಣೆಯ ಅಗತ್ಯ ಮನಗಂಡು ೨೦೧೩ ರಿಂದಲೇ ಪ್ರಯತ್ನ ಆರಂಭಿಸಿದ ಪರಿಣಾಮ ಇಂದು ಹೊಸ ಠಾಣೆ ಮತ್ತು ಸಿಬ್ಬಂದಿ ವಸತಿಗೃಹ ನಿರ್ಮಿಸಲಾಗಿದೆ ಎಂದು ಸ್ಮರಿಸಿದರು.
ಅಗ್ನಿಶಾಮಕ ಸೇವೆಯನ್ನು ತುರ್ತು ಅಗತ್ಯ ಎಂದು ಪರಿಗಣಿಸಿ ಅಗತ್ಯವಿರುವ ಕಡೆ ಉಚಿತವಾಗಿ ಸರ್ಕಾರಿ ಜಮೀನು ಒದಗಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ನಿಪ್ಪಾಣಿಯ ಮೂರು ಪೊಲೀಸ್ ಠಾಣೆಗಳಿಗೆ ಸುಸಜ್ಜಿತ ಕಟ್ಟಡ ಹಾಗೂ ಆಧುನಿಕ ಸೌಲಭ್ಯ ಒದಗಿಸಬೇಕು ಎಂದು ಗೃಹಸಚಿವರಿಗೆ ಮನವಿ ಮಾಡಿಕೊಂಡರು.
ಅಧಿಕಾರಿಗಳ ತುರ್ತು ಸಂಚಾರಕ್ಕೆ ವಾಹನ ಕೊರತೆ ಇರುವುದನ್ನು ಮನಗಂಡು ಟೌನ್ ಪೊಲೀಸ್ ಠಾಣೆಗೆ ತಮ್ಮ ಶಾಸಕರ ಅನುದಾನದಲ್ಲಿ ಒಂದು ವಾಹನ ನೀಡಿರುತ್ತೇನೆ ಎಂದು ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದರು.
ಪ್ರವಾಹದಿಂದ ಸಂತ್ರಸ್ತರಾಗಿರುವ ರೈತರು, ನೇಕಾರರು ಸೇರಿದಂತೆ ಎಲ್ಲರಿಗೂ ಅಗತ್ಯ ಪರಿಹಾರ ಮತ್ತು ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ. ಸಂತ್ರಸ್ತರು ಯಾವುದಕ್ಕೂ ಹೆದರುವ ಅಗತ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ವಿಧಾನಪರಿಷತ್ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಅವರು, ಪ್ರವಾಹ ಸಂದರ್ಭದಲ್ಲಿ ಜನರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಎಸ್.ಡಿ.ಆರ್.ಎಫ್. ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ನೆರೆಸಂತ್ರಸ್ತರ ಹಿತರಕ್ಷಣೆ ನಿಟ್ಟಿನಲ್ಲಿ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಅಗ್ನಿಶಾಮಕ ದಳದ ಹೆಚ್ಚುವರಿ ಮಹಾನಿರ್ದೇಶಕರಾದ ಸುನಿಲ್ ಅಗರವಾಲ್, ಜಿಲ್ಲೆಯಲ್ಲಿ ಹದಿಮೂರು ಅಗ್ನಿಶಾಮಕ ಠಾಣೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಯಬಾಗ ಮತ್ತು ಕಾಗವಾಡದಲ್ಲಿ ತಾತ್ಕಾಲಿಕ ಠಾಣೆಗಳು ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಿದರು.
ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ಎಸ್.ಡಿ.ಆರ್.ಎಫ್. ಬಲಪಡಿಸಲು ರಾಜ್ಯ ಸರ್ಕಾರವು ೨೦ ಕೋಟಿ ಅನುದಾನವನ್ನು ಮಂಜೂರು ಮಾಡಿದೆ.
೨೦೦ ಜನರನ್ನು ಆಯ್ಕೆ ಮಾಡಿ ಸೂಕ್ತ ತರಬೇತಿಯನ್ನು ನೀಡಿ ದೇಶದಲ್ಲಿಯೇ ಮಾದರಿ ಎಸ್.ಡಿ.ಆರ್.ಎಫ್. ತಂಡವನ್ನು ರಚಿಸಲಾಗುವುದು ಎಂದು ಸುನಿಲ್ ಅಗರವಾಲ್ ತಿಳಿಸಿದರು.
ರಾಯಬಾಗ ಶಾಸಕರಾದ ದುರ್ಯೋಧನ ಐಹೊಳೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್, ಐಜಿಪಿ ಎಚ್.ಜಿ.ರಾಘವೇಂದ್ರ ಸುಹಾಸ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ನಿಪ್ಪಾಣಿ ನಗರಸಭೆಯ ಜನಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.
ಅಗ್ನಿಶಾಮಕ ದಳದ ಉಪ ನಿರ್ದೇಶಕ ಸಿ. ಬಸವಣ್ಣ ಸ್ವಾಗತಿಸಿದರು.
ಇದಕ್ಕೂ ಮುಂಚೆ ಪೊಲೀಸ್ ಇಲಾಖೆಯ ವಸತಿಗೃಹಗಳನ್ನು ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

Share

About Site Default

Check Also

ಮಹಾರಾಷ್ಟ್ರದಲ್ಲಿ ತಗ್ಗಿದ ವರುಣನ ಆರ್ಭಟ.‌

ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಧೋ ಎಂದು ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ಪ್ರಮಾಣ ಇಂದು ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯಕ್ಕೆ ಹರಿದು …

Leave a Reply

Your email address will not be published. Required fields are marked *

error: Content is protected !!