ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಕಾರ್ಯಪಡೆಗೆ ಅಧ್ಯಕ್ಷರಾಗಿ ಡಾ. ಅಶೋಕ್ ಶೆಟ್ಟರ್ ನೇಮಕ

ಹುಬ್ಬಳ್ಳಿ : ಕೈಗಾರಿಕಾ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ರಾಜ್ಯ ಸರಕಾರ ರಚಿಸಿರುವ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಕಾರ್ಯಪಡೆಗೆ ಕೆ ಎಲ್ ಇ ಸಂಸ್ಥೆಯ ಹುಬ್ಬಳ್ಳಿಯ ಕೆ. ಎಲ್. ಇ. ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಅಶೋಕ್ ಶೆಟ್ಟರ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಕೆ.ಎಸ್.ಟಿ.ಇ.ಪಿ.ಎಸ್. ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿದ ಪ್ರಸ್ತಾವನೆಯನ್ನು ಅಂಗೀಕರಿಸಿದ ಶ್ರೀ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ, ಶನಿವಾರ ಕಾರ್ಯಪಡೆ ರಚಿಸಿ ಆದೇಶ ಹೊರಡಿಸಿದ್ದು, ಡಾ. ಅಶೋಕ ಶೆಟ್ಟರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಡೀನ್ ಪ್ರೊ. ರಾಜೇಶ್ ಸುಂದರೇಶನ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಉದ್ಯಮಶೀಲತಾ ವಿಭಾಗದ ಕಾರ್ಯಾಧ್ಯಕ್ಷ, ಅಸೋಸಿಯೇಟ್ ಪ್ರೊಫೆಸರ್ ಶ್ರೀಮತಿ ಶ್ರೀವರ್ಧಿನಿ ಕೆ. ಝಾ, ಧಾರವಾಡದಲ್ಲಿರುವ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ಪ್ರಾಧ್ಯಾಪಕರಾದ ಶ್ರೀ ಎಸ್. ಎಂ. ಶಿವಪ್ರಸಾದ, ಮೈಸೂರಿನಲ್ಲಿರುವ ಕೇಂದ್ರದ ಆಹಾರ ಮತ್ತು ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಬೈಯೋಟೆಕ್ನಾಲಾಜಿಯ ಪ್ರಾಚಾರ್ಯರಾದ ಡಾ. ನಂದಿನಿ ಪ್ರಸಾದ್ ಶೆಟ್ಟಿ, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಅತಿಥಿ ಸಂಶೋಧಕರಾದ ಶ್ರೀ ಮಧುಸೂಧನ್ ವಿ. ಅತ್ರೆ, ಬೆಂಗಳೂರಿನ ಸ್ಯಾಮ್ಸ್ಯಾಂಗ್ ಆರ್.& ಡಿ ಸಂಸ್ಥೆಯ ಮಲ್ಟಿಮೀಡಿಯಾ ವಿಭಾಗದ ಮುಖ್ಯಸ್ಥರಾದ ಶ್ರೀ ಬಾಲಾಜಿ ಹೋಳೂರ, ಬೆಂಗಳೂರಿನ ಕೆ. ಟು. ಟೆಕ್ನಾಲಜಿ ಕಂಪನಿಯ ಸಿಇಒ ಡಾ. ಅನಂತ ಕೊಪ್ಪರ, ಬೆಂಗಳೂರಿನ ನಗರಭಾವಿಯಲ್ಲಿರುವ ಸೋಶಿಯಲ್ ಮತ್ತು ಎಕನಾಮಿಕ್ ಕೌನ್ಸಿಲ್ ಇನ್ಸ್ಟಿಟ್ಯೂಟ್ ನ ಪ್ರೊ. ಮೀನಾಕ್ಷಿ ರಾಜೀವ ಅವರು ಸದಸ್ಯರಾಗಿ ನೇಮಕಗೊಂಡಿದ್ದು, ಬೆಂಗಳೂರಿನ ಕರ್ನಾಟಕ ಸೈನ್ಸ್ ಮತ್ತು ಟೆಕ್ನಾಲಜಿ ಉತ್ತೇಜನಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಕಾರ್ಯದರ್ಶಿಗಳಾಗಿರುವರು.

ಡಾ. ಶೆಟ್ಟರ ನೇತೃತ್ವದ ಕಾರ್ಯಪಡೆ ರಾಜ್ಯದ ಆರ್&ಡಿ ನೀತಿ ಸಿದ್ಧಪಡಿಸಲು ಸರಕಾರಕ್ಕೆ ನೆರವಾಗಲಿದ್ದು, ಅದಕ್ಕಾಗಿ ರಾಜ್ಯದಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಉದ್ಯಮ ಕ್ಷೇತ್ರಗಳಿಗೆ ಭೇಟಿ ನೀಡಲಿದೆ. ಶಾಲಾ ಹಂತದಿಂದ ಪ್ರಾರಂಭಮಾಡಿ ಕಾಲೇಜು ಮತ್ತು ವಿಶ್ವವಿದ್ಯಾಲಯದವರೆಗೂ ಇದರ ಲಾಭ ತಟ್ಟುವಂತೆ ಗಮನಹರಿಸಲಿದ್ದು, ಭವಿಷ್ಯದಲ್ಲಿ ಪ್ರತಿ ಕ್ಷೇತ್ರದಲ್ಲಿ ವಿಶೇಷವಾಗಿ ಕೃಷಿ ಹಾಗು ಆಹಾರ ಕ್ಷೇತ್ರದಲ್ಲಿ ತಂತ್ರಜ್ಞಾನ, ಆವಿಷ್ಕಾರದ ಮಾರ್ಗಸೂಚಿಯನ್ನು ನೀಡಲಿದೆ ಎಂದರು.

ಈ ಬಗ್ಗೆ ಮಾತನಾಡಿದ ಕೆ. ಎಲ್. ಇ. ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಅಶೋಕ ಶೆಟ್ಟರ, ಸಂಶೋಧನೆ ಎಂಬುದು ನಮ್ಮ ಬದುಕಿನ ಭಾಗ. ಅದೇನೂ ಹೊಸದಲ್ಲ. ಸಂಶೋಧನೆ ಎಂದರೆ ಅದು ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಮಾತ್ರ ನಡೆಯುವ ಮತ್ತು ನಾಲ್ಕು ಗೋಡೆಗಳ ನಡುವೆ ನಡೆಯುವ ಕ್ರಿಯೆಯಲ್ಲ, ಅದರಾಚೆಗೂ ಇದೆ ಎಂದರು.

ಸಂಶೋಧನೆ ಎಂದರೆ ಬರಿ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಗಷ್ಟೇ ಅಲ್ಲ, ಕೃಷಿ, ಆಹಾರ, ಪೌಷ್ಟಿಕತೆ ಹೀಗೆ ನಾನಾ ವಲಯದಲ್ಲೂ ಸಂಶೋಧನೆಯ ಪಾತ್ರ ಮಹತ್ವದ್ದಾಗಿದೆ. ಸಂಶೋಧನೆಯಿಂದಲೇ ಭವಿಷ್ಯದ ಅಭಿವೃದ್ಧಿ ಎಂದರು. ಗುಜರಾತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧ ಪಟ್ಟಂತೆ ಇನ್ನೋವೆಟಿವ್ ಪಾಲಿಸಿ ಎಂದು ತಜ್ಞರ ತಂಡ ರೂಪಿಸಿದೆ. ಆದರೆ, ಕರ್ನಾಟಕ ರಾಜ್ಯ ಸರಕಾರವು ರೂಪಿಸಿದ ಈ ಕಾರ್ಯಪಡೆ ಒಟ್ಟಾರೆಯಾಗಿ ಭಿನ್ನವಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿ ದಿಸೆಯ ವಿಶಾಲ ಆಳ ಮತ್ತು ಅಗಲ ವ್ಯಾಪ್ತಿ ಒಳಗೊಂಡಿದೆ ಎಂದು ವಿವರಿಸಿದರು. ಬಿ. ವಿ. ಬಿ ಯ ಹಳೆಯ ವಿದ್ಯಾರ್ಥಿಯು ಮತ್ತು ರಾಜ್ಯದ ಮುಖ್ಯಮತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ನನ್ನ ಮೇಲೆ ಬಹಳಷ್ಟು ಭರವಸೆ ಇಟ್ಟು ಕಾರ್ಯಪಡೆಯ ಅಧ್ಯಕ್ಷ ಸ್ಥಾನ ನೀಡಿದ್ದು ಅವರಿಗೆ ಕೃತಜ್ಞನಾಗಿದ್ದೆನೇ ಎಂದು ಡಾ. ಅಶೋಕ ಶೆಟ್ಟರ್ ನುಡಿದರು.

ಡಾ. ಅಶೋಕ ಶೆಟ್ಟರ ಅವರನ್ನು ಕಾರ್ಯಪಡೆಯ ಅಧ್ಯಕ್ಷರಾಗಿ ನೇಮಕ ಮಾಡಿರುವುದಕ್ಕೆ ಹರ್ಷ ವ್ಯಕ್ತ ಪಡಿಸಿರುವ ಕೆ.ಎಲ್.ಈ. ಸಂಸ್ಥೆಯ ಛೇರ್ಮನ್ ಡಾ. ಪ್ರಭಾಕರ ಕೋರೆ, ಡಾ. ಶೆಟ್ಟರ ಅವರು ಕೆ.ಎಲ್.ಈ. ತಾಂತ್ರಿಕ ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಿದಂತೆ, ರಾಜ್ಯದ ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯವನ್ನು ಮಾಡಲಿ ಎಂದು ಹಾರೈಸಿದರು.

Share News

About admin

Check Also

ಬೆಲೆ ಏರಿಕೆ ಕುರಿತು ಸಿಹಿ ಸುದ್ದಿ ನೀಡಿದ ಸಿಎಂ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್, ಹಾಲಿನ ದರ ಏರಿಕೆ ಮಾಡಲು ಚಿಂತನೆ ನಡೆದಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದಂತೆ …

Leave a Reply

Your email address will not be published. Required fields are marked *

You cannot copy content of this page