ನವದೆಹಲಿ: ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ತೀವ್ರ ಚಿಂತಾಜನಕವಾಗಿದೆ. ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಬುಧವಾರ (ಜುಲೈ 6) ಮಧ್ಯರಾತ್ರಿ ಪಟ್ನಾದ ಖಾಸಗಿ ಆಸ್ಪತ್ರೆಯಿಂದ ಏರ್‌ಲಿಫ್ಟ್ ಮಾಡಿ ದೆಹಲಿಗೆ ಸ್ಥಳಾಂತರಿಸಲಾಗಿದೆ. ದೆಹಲಿಯ ಏಮ್ಸ್‌ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಲಾಲೂ ಪ್ರಸಾದ್ ಯಾದವ್ ಮೆಟ್ಟಿಲು ಇಳಿಯುವಾಗ ಎಡವಿ ಬಿದ್ದು ಎರಡು ದಿನಗಳ ಹಿಂದೆ ಬಲ ಭುಜದ ಮೂಳೆ ಮುರಿದುಕೊಂಡಿದ್ದಾರೆ. ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿತ್ತು. ಅವರನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಿದಾಗ ಭುಜದ ಭಾಗಕ್ಕೆ ಪೆಟ್ಟಾಗಿರುವುದು ತಿಳಿದುಬಂದಿತ್ತು.
ವಯೋಸಹಜ, ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಇವರು ಮೂತ್ರಪಿಂಡ ಸಮಸ್ಯೆಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು. ಈ ಮಧ್ಯೆ ಅವಘಡ ಸಂಭವಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅನೇಕ ಅನಾರೋಗ್ಯ ಸಮಸ್ಯೆಯ ನಡುವೆ ಮೂರು ಸ್ಥಳಗಳಲ್ಲಿ ಮುರಿತ ಕಂಡು ಬಂದ ಹಿನ್ನೆಲೆಯಲ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಯಾದವ್ ಕುಟುಂಬದ ಮೂಲಗಳ ಪ್ರಕಾರ ಲಾಲೂ ಪ್ರಸಾದ್ ಯಾದವ್ ಶ್ವಾಸಕೋಶದಲ್ಲಿ ನೀರು ತುಂಬಿದೆ. ಇದರಿಂದ ಅವರ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಮೂತ್ರಪಿಂಡದ ಕಸಿ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಅವರು ತುಸು ಚೇತರಿಸಿಕೊಂಡ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸಿಂಗಪುರಕ್ಕೆ ಕರೆದೊಯ್ಯಲು ವೈದ್ಯರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಲಾಲೂ ಪ್ರಸಾದ್ ಯಾದವ್ ದೆಹಲಿ ತಲುಪಿದ ನಂತರ ಅವರ ಪುತ್ರ ತೇಜಸ್ವಿ ಯಾದವ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದು, ಮೆಟ್ಟಿಲುಗಳಿಂದ ಬಿದ್ದ ಕಾರಣ ಅವರ ದೇಹದ ಮೂರು ಸ್ಥಳಗಳಲ್ಲಿ ಮುರಿತವಾಗಿದೆ. ಇದರಿಂದ ಅವರು ಚಲಿಸಲು ಸಾಧ್ಯವಾಗುತ್ತಿಲ್ಲ. ಏಮ್ಸ್ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದು, ಮುಂದಿನ ಚಿಕಿತ್ಸೆ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.