ದೆಹಲಿ- ಇವತ್ತು ಇಡೀ ದೇಶದ ಜನರ ಚಿತ್ತವೇ ಸುಪ್ರೀಂಕೋರ್ಟ್ ನ ತೀರ್ಪಿನತ್ತ ಎದುರುನೋಡ್ತಾ ಇತ್ತು. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 500, 1000 ಮುಖಬೆಲೆಯ ಹಳೆಯ ನೋಟುಗಳನ್ನು ರದ್ದು ಮಾಡಿತ್ತು. ಈ ಸಂಬಂಧ ಸುಪ್ರೀಂಕೋರ್ಟ್ ನಲ್ಲಿ 58 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಲಯ ಮಹತ್ವದ ತೀರ್ಪು ಕೊಟ್ಟಿದ್ದು, ನೋಟುಗಳ ಅಮಾನೀಕರಣ ತಪ್ಪಲ್ಲ ಎಂದು ತೀರ್ಪು ನೀಡಿದ್ದು, ಕೇಂದ್ರದ ನಿರ್ಧಾರವನ್ನು ಎತ್ತಿ ಹಿಡಿದಿದೆ. ಆರ್‌ಬಿಐ ಒಪ್ಪಿಗೆ ಪಡೆದೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ತಜ್ಞರ ಸಲಹೆ ಪಡೆದು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸುಪ್ರೀಂಕೋರ್ಟ್ ನ ಐವರು ನ್ಯಾಯಮೂರ್ತಿಗಳಲ್ಲಿ ಕೇಂದ್ರದ ನಿರ್ಧಾರವನ್ನು 4:1 ಅನುಪಾತದಲ್ಲಿ ಮಹತ್ವದ ತೀರ್ಪು ನೀಡಲಾಗಿದೆ. ಇದೇ ಪೀಠದ ನ್ಯಾಯಮೂರ್ತಿ ನಾಗರತ್ನ ಅವರು ಭಿನ್ನ ತೀರ್ಪನ್ನು ನೀಡಿದ್ದಾರೆ. ಅವರು ನೋಟುಗಳನ್ನು ಅಮಾನ್ಯ ಮಾಡಲು ಕಾನೂನಿ ಅಗತ್ಯ ಇತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರದ ನೋಟು ಅಸಿಂಧು ಪ್ರಶ್ನೆ ಮಾಡಿ ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕಾರ ಮಾಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ನೋಟುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ, ಸ್ವಯಂ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಆರ್‌ಬಿಐನ ಕೇಂದ್ರೀಯ ಮಂಡಳಿಯ ಶಿಫಾರಸುಗಳ ಅನ್ವಯ ಮಾತ್ರವೇ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಬಹುದು. ಹೀಗಾಗಿ 2016ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಅಪನಗದೀಕರಣ ನೀತಿ ತಪ್ಪು ನಿರ್ಧಾರ ಎಂದು ವಾದಿಸಿದ್ದರು. ಮತ್ತೊಂದೆಡೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಈ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಸರಿಯಲ್ಲ ಎಂದಿತ್ತು. ಜೊತೆಗೆ ಸಮಯವನ್ನು ಹಿಂದಕ್ಕೆ ಸರಿಸುವ, ಒಡೆದ ಮೊಟ್ಟೆಯನ್ನು ಮರುಜೋಡಿಸುವ ಇಂಥ ಯತ್ನಗಳಿಂದ ಯಾರಿಗೂ ಯಾವುದೇ ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದಿತ್ತು. ಅಲ್ಲದೆ ನಕಲಿ ನೋಟು ತಡೆ, ಭಯೋತ್ಪಾದನೆಗೆ ಹಣ ಪೂರೈಕೆ ಜಾಲಕ್ಕೆ ಕಡಿವಾಣ, ಕಪ್ಪುಹಣ ಮತ್ತು ತೆರಿಗೆ ವಂಚನೆ ತಡೆಯಲು ಅಪನಗದೀಕರಣ ಘೋಷಿಸಲಾಗಿದೆ. ಇದು ಸಾಕಷ್ಟು ಯೋಚಿಸಿ ಕೈಗೊಂಡ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿತ್ತು.
ನೋಟು ನಿಷೇಧದಿಂದ ನಾಗರೀಕರು ಕೆಲ ಕಾಲ ಸಮಸ್ಯೆಗಳನ್ನು ಎದುರಿಸಿದ್ದರು, ಆದರೆ ದೇಶಕಟ್ಟುವ ಕೆಲಸದಲ್ಲಿ ಇದು ಅನಿವಾರ್ಯ. ಆದರೆ, ಇಂಥ ಸಮಸ್ಯೆಗಳನ್ನು ಬಳಿಕ ಲಭ್ಯ ವ್ಯವಸ್ಥೆ ಮೂಲಕ ಪರಿಹರಿಸಲಾಯಿತು’ ಎಂದು ಭಾರತೀಯ ರಿಸರ್ವ್ ಬ್ಯಾಂಕ್, ನ್ಯಾಯಾಲಯಕ್ಕೆ ಮಾಹಿತಿ ನೀಡಿತು.
