ವಿಜಯಪುರ:- ವಯೋಸಹಜ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾಗಿದ್ದಾರೆ. ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಂಜೆ ೬ ಗಂಟೆ ೫ ನಿಮಿಷಕ್ಕೆ ಶ್ರೀಗಳು ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ವಿಧಿವಶರಾದರು. 82ರ ಇಳಿ ವಯಸ್ಸಿನ ಅವರು ಪ್ರವಚನ, ಬೋದನೆ, ಮಾಡುವ ಮೂಲಕ ದೈವ ಮಾನವ ಎಂದು ಕೀರ್ತಿ ಪಡೆದಿದ್ದರು. ನಾಳೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರೆವೆರಿಸಲಾಗುವುದು. ಹಾಗೂ ಅಪಾರ ಜ್ಞಾನಿ, ಸರಳತೆಯ ಸಾಕಾರಮೂರ್ತಿ, ಮಹಾಪುರುಷ ಸಿದ್ದೇಶ್ವರ ಸ್ವಾಮಿ ದರ್ಶನಕ್ಕೆ ಈಗಾಗಲೇ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ ೫ ಗಂಟೆಯ ವರೆಗೂ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ.ಸರಳ ವ್ಯಕ್ತಿತ್ವದ ಸಿದ್ದೇಶ್ವರ ಸ್ವಾಮಿಯವರು ತಮ್ಮ ಅಂತ್ಯ ಕ್ರಿಯೆ ಅತಿ ಸರಳ ರೀತಿಯಲ್ಲಿ ನಡೆಸುವಂತೆ ಮೊದಲೇ ತಮ್ಮ ಶಿಷ್ಯರಿಗೆ ತಿಳಿಸಿದ್ದರು. ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ಮೂರ್ತಿ ಪ್ರತಿಷ್ಠಾಪನೆ ಮಾಡದಂತೆ ಹೇಳಿದ್ದರು ಎಂದು ಹೇಳಲಾಗಿದೆ. ದೇಹವನ್ನು ಅಗ್ನಿಸ್ಪರ್ಶ ಮಾಡಿ ಎಂದು ತಿಳಿಸಿದ್ದರು. ಹಾಗೂ ಯಾವುದೇ ಮಂದಿರ , ಸ್ಮಾರಕ ನಿರ್ಮಿಸಬಾರದು ಎಂದು ಸಹ ೨೦೧೪ ರಲ್ಲೇ ವಿಲ್ ಬರೆದಿದ್ದರು.
