ಹುಬ್ಬಳ್ಳಿ: ಆದುನಿಕತೆ ಬೆಳದಂತೆ, ಆರ್ಥಿಕ ಪರಿಸ್ಥಿತಿ ಸುಧಾರಣೆ ತರಲು, ಸಂಕಷ್ಟ ಎದುರಿಸುತ್ತಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ, ವಾಯು ಮಾಲಿನ್ಯ ತಪಾಸಣೆ ಕೇಂದ್ರ ಆರಂಭಿಸಿದೆ. ಇದುವರೆಗೆ ಸಂಸ್ಥೆಯ ವಾಹನಗಳಿಗೆ ಸೀಮಿತವಾಗಿದ್ದ ವಾಯು ಮಾಲಿನ್ಯ ತಪಾಸಣೆ ಕೇಂದ್ರದಲ್ಲಿ ಖಾಸಗಿ ವಾಹನಗಳ ತಪಾಸಣಾ ಕಾರ್ಯ ನಡೆಯಲಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾರಿಗೆ ಸಂಸ್ಥೆಯಲ್ಲಿ ಖಾಸಗಿ ವಾಹನಗಳ ಪಿಯುಸಿ ಟೆಸ್ಟ್ ಸೆಂಟರ್ ತೆರೆಯುತ್ತಿರುವುದು ರಾಜ್ಯದಲ್ಲೇ ಮೊದಲು. ಬೆಳಗಾವಿ ಶಿರಸಿ ಬಾಗಲಕೋಟೆ, ಚಿಕ್ಕೋಡಿ, ಹಾವೇರಿ, ಗದಗ, ಧಾರವಾಡ, ಹುಬ್ಬಳ್ಳಿ-ಧಾರವಾಡ ನಗರ, ಹುಬ್ಬಳ್ಳಿ ಗ್ರಾಮಾಂತರ ಹೀಗೆ 6 ಜಿಲ್ಲೆಗಳ 9 ವಿಭಾಗಗಳನ್ನು ಹೊಂದಿರುವ ದೊಡ್ಡ ನಿಗಮವಿದು.ಬರೋಬ್ಬರಿ 22,500ಕ್ಕೂ ಅಧಿಕ ನೌಕರರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ನಿಗಮ ಮಾತ್ರ ಲಾಭದತ್ತ ಬರುತ್ತಲೇ ಇಲ್ಲ. ಇದರಿಂದ ಬೇಸತ್ತ ಸಾರಿಗೆ ಇಲಾಖೆ ಇದೀಗ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಮತ್ತೊಂದು ಮಾರ್ಗವನ್ನು ಕಂಡುಕೊಂಡಿದೆ. ಅದೇ ವಾಯು ಮಾಲಿನ್ಯ ತಪಾಸಣೆ ಪರೀಕ್ಷೆ. ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ವಾಯುಮಾಲಿನ್ಯ ತಪಾಸಣೆ ಕೇಂದ್ರ ತೆರೆಯಲಾಗಿದೆ. ಇದರಿಂದ ತನ್ನ ಸಂಸ್ಥೆಗಳ ಬಸ್ ಸೇರಿದಂತೆ ಎಲ್ಲ ವಾಹನಗಳ ವಾಯುಮಾಲಿನ್ಯ ತಪಾಸಣೆ ಮಾಡಲು ಅನುಕೂಲವಾಗುತ್ತದೆ. ಇದರೊಂದಿಗೆ ಖಾಸಗಿ ವಾಹನಗಳನ್ನು ಇಲ್ಲಿ ತಪಾಸಣೆ ಮಾಡಲಿದೆ. ಪ್ರತಿ ಖಾಸಗಿ ವಾಹನಕ್ಕೆ. 150 ದರ ನಿಗದಿಪಡಿಸಿದೆ. ಪ್ರತಿದಿನ ಕನಿಷ್ಠವೆಂದರೂ 100 ಖಾಸಗಿ ವಾಹನಗಳಾದರೂ ವಾಯು ಮಾಲಿನ್ಯ ತಪಾಸಣೆ ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.