ಹುಬ್ಬಳ್ಳಿ: ಗೌರಿ ಲಂಕೇಶ್ ಹತ್ಯೆ ಮಾಡಿದವರು ಸನಾತನ ಧರ್ಮದವರು ಎಂದ ಸಿದ್ದುಗೆ ಜೋಶಿ ತಿರುಗೇಟು ನೀಡಿದ್ದಾರೆ. ಸನಾತನ ಧರ್ಮ ಅಂದರೆ ಹಿಂದೂ ಧರ್ಮ. ಇದರಲ್ಲಿ ಸಿದ್ದರಾಮಯ್ಯನವರ ಹಿಂದೂ ವಿರೋಧಿ, ಹಿಂದೂ ದ್ವೇಷ ಮನೋಭಾವನೆ ಗೊತ್ತಾಗತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸನಾತನ ಧರ್ಮಕ್ಕೆ ಅಗಾಧವಾದ ಅರ್ಥ ಇದೆ. ಜಗತ್ತಿನಲ್ಲಿ ಬಹಳ ಜನ ಸನಾತನ ಧರ್ಮ ಅಧ್ಯಯನ ಮಾಡೋದಕ್ಕೆ ಭಾರತಕ್ಕೆ ಬರುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹಿಂದೂ ವಿರೋಧಿ, ಹಿಂದೂ ದ್ವೇಷಿ ಎನ್ನುವುದಕ್ಕೆ ಇದು ಸಾಕು ಎಂದರು.
ಬಾಡ್ತಾ ಹೌಸ್ ಪ್ರಕರಣದಲ್ಲಿ ಸೋನಿಯಾಗಾಂಧಿಗೆ ದುಃಖ ಆಗಿದ್ದು, ಭಯೋತ್ಪಾದಕ ಸತ್ತಾಗ. ಸಿದ್ದರಾಮಯ್ಯ ನೇರವಾಗಿ ಹಿಂದೂ ಧರ್ಮದ ವಿರುದ್ಧ ಮಾತನಾಡಿದ್ದಾರೆ. ರಾಹುಲ್ ಗಾಂಧಿಗೆ ತಾಖತ್ತಿದ್ದರೆ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಜೋಶಿ ಸವಾಲ್ ಹಾಕಿದ್ದಾರೆ.
ರಾಹುಲ್ ಗಾಂಧಿ ಅಲ್ಲಿ ಇಲ್ಲಿ ಹೋಗಿ ಕುಂಕುಮ ಹಂಚಿಕೊಂಡು ಡ್ರಾಮಾ ಮಾಡುತ್ತಾರೆ. ಇದೀಗ ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿ ಮಾತನಾಡುತ್ತಿದ್ದಾರೆ. ಹಿಂದೂ ಮತ್ತು ಹಿಂದೂತ್ವದಲ್ಲಿ ಏನೂ ಫರಕ್ ಇಲ್ಲ. ಹಿಂದೂತ್ವ ಎನ್ನುವುದು ಹಿಂದೂಗಳ ಜೀವನ ಪದ್ಧತಿ. ಸಿದ್ದು ನಾನು ಹಿಂದೂ ಎನ್ನುವುದು ವೋಟ್ ಗಾಗಿ. ಇವರೆಲ್ಲ ಮಾತಾಡೋದು ಮುಸ್ಲಿಂರ ತುಷ್ಟಿಕರಣಕ್ಕೆ ಎಂದು ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಟಿಕೀಸುವ ಭರದಲ್ಲಿ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ರಾಮಮಂದಿರ ರಾಜಕೀಯವಾಗಿ ನಾವ ಬಳಸಿಕೊಂಡಿಲ್ಲ. ಕಾಂಗ್ರೆಸ್ಸಿನವರೇ ರಾಮಮಂದಿರ ಬಳಸಿಕೊಂಡಿದ್ದು. ಕಾಂಗ್ರೆಸ್ ನೇ ರಾಮಮಂದಿರಕ್ಕೆ ಕೀ ಹಾಕಿತ್ತು, ಅಲ್ಲಿ ಬಂದವರ ಮೇಲೆ ಗೋಲಿಬಾರ್ ಮಾಡಿತ್ತು ಎಂದರು.
ಸಾಮಾಜಿಕ ಜಾಲತಾಣದಲ್ಲಿ ಮೋದಿ ಗೋ ಬ್ಯಾಕ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ವ್ಯವಸ್ಥಿತ ಟೂಲ್ ಕಿಟ್ ಎಂದು ಕಿಡಿ ಕಾರಿದರು.