ಬೀದರ್: ಸ್ಯಾಂಟ್ರೋ ರವಿ ಜೊತೆಗೆ ಸಚಿವರು, ಬಿಜೆಪಿ ನಾಯಕರು ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳ ವೈರಲ್ ಆಗುತ್ತಿವೆ. ಅದರಲ್ಲೂ ಮುಖ್ಯವಾಗಿ ಕಂತೆ-ಕಂತೆ ನೋಟುಗಳ ಜೊತೆ ಸ್ಯಾಂಟ್ರೋ ರವಿ ಫೋಟೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಆರಗ ಮನೆಯಲ್ಲಿ ಹಣದ ಲೆಕ್ಕ ಹಾಕುತ್ತಿರುವ ಫೋಟೋ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಇಂದು(ಜನವರಿ 08) ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಗೃಹ ಸಚಿವರ ಮನೆಯಲ್ಲಿ ಹಣದ ಲೆಕ್ಕ ಹಾಕಿರುವ ಫೋಟೋ ವೈರಲ್ ಆಗಿದೆ. ಆರಗ ಮನೆಯಲ್ಲಿ ಲೆಕ್ಕ ಹಾಕಿದ ಹಣದ ಫೋಟೋ ತೆಗೆದವರು ಯಾರು? ಎಸಿಪಿ ವರ್ಗಾವಣೆ ಮಾಡಿಸಲು 15 ಲಕ್ಷ ಹಣ ಎಣಿಸುತ್ತಿರುವುದಂತೆ. ಇದು ಗೃಹಸಚಿವರ ನಿವಾಸದಲ್ಲೇ ನಡೆದಿದೆ, ಈ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಸಚಿವ ಸೋಮಶೇಖರ್ ಜತೆ ಸ್ಯಾಂಟ್ರೋ ರವಿ ವರ್ಗಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಆ ವಿಡಿಯೋ ರೆಕಾರ್ಡ್ ನಾನು ಮಾಡಿಸಿದ್ದಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಇಂತಹ ವಿಷಯ ಇಟ್ಟುಕೊಂಡು ರಾಜಕೀಯ ಮಾಡುವ ಕರ್ಮ ನನಗಿಲ್ಲ ಸಿಎಂ ದಲ್ಲಾಳಿಗಳೇ ಆಡಳಿತ ನಡೆಸುವ ಸ್ಥಿತಿ ಸೃಷ್ಟಿ ಮಾಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.