ಹುಬ್ಬಳ್ಳಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯುವ ಜನತೆ ಮಹತ್ವದ ಪಾತ್ರ ವಹಿಸಲಿದ್ದಾರೆ. ಯುವಕರಿಗೆ ಬಿಜೆಪಿ ಪಕ್ಷ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದೆ. ಹಾಗಾಗಿ ಈ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನವನ್ನು ನಾವು ಗೆಲ್ಲುತ್ತೇವೆ ವಿಶ್ವಾಸ ನಮ್ಮಗೆ ಇದೆ ಎಂದು ಸಂಸದ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ – ಧಾರವಾಡದಲ್ಲಿ ಯುವ ಜನೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತಿದೆ. ದೇಶದ ಮೂಲೆ ಮೂಲೆಯಿಂದ ಭಾಗವಹಿಸಲು ಯುವಕ-ಯುವತಿಯರು ಆಗಮಿಸಿದ್ದಾರೆ. ಇವರೆಲ್ಲ ಬಹಳ ಉತ್ಸಾಹದಿಂದ ವಿವೇಕಾನಂದರ ಆದರ್ಶವನ್ನು ಮೈಗೂಡಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ದೇಶಕ್ಕೆ ಹಾಗೂ ಯುವಕರಿಗೆ ಸಂದೇಶ ಕೊಟ್ಟಿದ್ದಾರೆ ಎಂದರು.
ಬಹಳ ಉತ್ಸಾಹದಿಂದ ನಮ್ಮ ಕಾರ್ಯಕರ್ತರು ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ:
ಇಂದು ನಾನು ಯುವ ಜನೋತ್ಸವದಲ್ಲಿ ಭಾಗಿಯಾಗಲು ಮತ್ತು ಯುವಕರನ್ನು ಉದ್ದೇಶಿಸಿ ಮಾತನಾಡಲು ಬಂದಿದ್ದೇನೆ. ಇದಕ್ಕೂ ಪೂರ್ವದಲ್ಲಿ ಯುವ ಮೋರ್ಚಾದ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮ ಕೂಡಾ ಮಾಡುತ್ತೇನೆ. ಬಹಳ ಉತ್ಸಾಹದಿಂದ ನಮ್ಮ ಕಾರ್ಯಕರ್ತರು ಚುನಾವಣೆಯನ್ನು ಎದುರು ನೋಡತ್ತಾ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಜಾರಿಗೆ ತಂದಿದೆ. ಅವುಗಳನ್ನು ಜನರ ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಯುವ ಪಡೆ ಮಾಡಲಿದೆ ಎಂದು ವಿವರಿಸಿದರು.
ಯುವಕರು ರಾಜಕೀಯವಾಗಿ ಮುಂದೆ ಬರಲು ಬಿಜೆಪಿ ಪಕ್ಷ ಅವಕಾಶ ಕೊಡುತ್ತದೆ:
ಈಗಾಗಲೇ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಬಂದು ಹೊಸ ಸಂಚಲನ ಹುಟ್ಟು ಹಾಕಿದ್ದಾರೆ. ಬರುವ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ನೂರಕ್ಕೆ ನೂರು ಬಿಜೆಪಿ ಅತಿಹೆಚ್ಚು ಸ್ಥಾನ ಗೆಲುವು ಸಾಧಿಸಲಿದೆ. ಸಾಮಾನ್ಯ ವ್ಯಕ್ತಿ ರಾಜಕೀಯದಲ್ಲಿ ಅವಕಾಶ ಪಡೆಯಬಹುದು ಎಂದರೇ ಅದು ಬಿಜೆಪಿಯಲ್ಲಿ ಮಾತ್ರ, ಸಂಘಟನಾತ್ಮಕ ಹಾಗೂ ವ್ಯಕ್ತಿ ವಿಕಸನ ಆಗಲು ಯುವಕರಿಗೆ ಸಿಗುವ ಮಾನ್ಯತೆ ಬೇರೆ ಯಾವ ಪಕ್ಷದಲ್ಲಿ ಇಲ್ಲ. ಯುವಕರು ರಾಜಕೀಯವಾಗಿ ಮುಂದೆ ಬರಲು ಬಿಜೆಪಿ ಪಕ್ಷ ಅವಕಾಶ ಕೊಡುತ್ತದೆ ಎಂದು ಹೇಳಿದರು.
ದೇಶದ ಜನಸಂಖ್ಯೆಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ:
ದೇಶದ ಜನಸಂಖ್ಯೆಯಲ್ಲಿ ಯುವಕರ ಪಾತ್ರ ಮಹತ್ವದ್ದು, ಕರ್ನಾಟಕದಲ್ಲಿ ಯುವಕರೇ ಹೆಚ್ಚಿದ್ದಾರೆ. ಈಗಾಗಲೇ ಪ್ರತಿಕ್ಷೇತ್ರದಿಂದ 4-5 ಸಾವಿರ ಹೊಸ ಮತದಾರರು ಸೇರ್ಪಡೆ ಆಗಿದ್ದಾರೆ. ಯುವಕರ ಬೇಡಿಕೆಗಳನ್ನು ಕೇಳೋದು, ಸರ್ಕಾರ ಯೋಜನೆ ಅವರಿಗೆ ತಲುಪಿಸೋದು ಯುವ ಮೋರ್ಚಾ ಮಾಡುತ್ತದೆ ಎಂದು ತಿಳಿಸಿದರು.
ಜಾತಿ ಯಾವುದೇ ಇರಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸೋದೆ ನಮ್ಮ ಉದ್ದೇಶ:
ಬಿಜೆಪಿ ಮೂಲ ಸಿದ್ದಾಂತ ಅಂತ್ಯೋದಯ. ಯಾರು ಅತ್ಯಂತ ಕಡುಬಡವ ಇದ್ದಾನೆ. ಅವನಿಗೆ ನ್ಯಾಯ ಒದಗಿಸೋದು ನಮ್ಮ ಧ್ಯೇಯ, ಜಾತಿ ಯಾವುದೇ ಇರಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸೋದೆ ನಮ್ಮ ಉದ್ದೇಶ ಎಂದರು.