ಹುಬ್ಬಳ್ಳಿ: ವಿಧಾನಸಭಾ ಚುನಾವಣಾ ಕಾವು ರಂಗು ಪಡೆದುಕೊಳ್ಳುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಕೂಡ ಸಾಕಷ್ಟು ಚುರುಕುಗೊಂಡಿದೆ. ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕನ ವಿರುದ್ಧ ಈಗ ಗಂಭೀರ ಆರೋಪ ಮಾಡುವ ಮೂಲಕ ಕಮಲ ಪಡೆ ಈಗ ಹೋರಾಟಕ್ಕೆ ಇಳಿದಿದೆ.
ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ವಿರುದ್ಧ ಈಗ ಬಿಜೆಪಿ ನಾಯಕರು ರಸ್ತೆಗೆ ಇಳಿದು ಹೋರಾಟ ನಡೆಸುತ್ತಿದ್ದಾರೆ. ಹತ್ತು ವರ್ಷಗಳಲ್ಲಿ ಕಿಂಚಿತ್ತೂ ಅಭಿವೃದ್ಧಿ ಮಾಡದೇ ಬಿಜೆಪಿ ಸರ್ಕಾರ ಯೋಜನೆಯಲ್ಲಿ ಪುಕ್ಕಟ್ಟೆಯಾಗಿ ಹೆಸರು ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಜಾತಿ ರಾಜಕಾರಣ ಮಾಡುವ ಮೂಲಕ ವೋಟ್ ಬ್ಯಾಂಕ್ ಗಾಗಿ ಹಾಗೂ ಕಾಂಗ್ರೆಸ್ ಮತದಾರರ ಸ್ಥಳದಲ್ಲಿ ಮಾತ್ರ ಸಮಸ್ಯೆ ಬಗೆಹರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನೂ ಬಿಜೆಪಿ ಹಾಗೂ ಕಾಂಗ್ರೆಸ್ ಜಟಾಪಟಿ ಸಾಕಷ್ಟು ಮುನ್ನೆಲೆಗೆ ಬಂದಿದ್ದು, ತಮ್ಮ ಅಧಿಕಾರದ ಅವಧಿಯಲ್ಲಿಯೇ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕನ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಅಲ್ಲದೇ ಹತ್ತು ವರ್ಷಗಳ ಅಧಿಕಾರದ ಅವಧಿಯಲ್ಲಿ ಜನರಿಗೆ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡಲು ಸಾಧ್ಯವಾಗಿಲ್ಲ. ಶಿಕ್ಷಣಕ್ಕೆ ಶಾಸಕ ಅಬ್ಬಯ್ಯ ಅವರ ಕೊಡುಗೆ ಶೂನ್ಯ ಎಂದು ಅಸಮಾಧಾನ ಹೊರಹಾಕಿದ್ದಾರೆ.