ಹುಬ್ಬಳ್ಳಿ: ಪಿ.ಎಸ್.ಐ ನೇಮಕಾತಿ, ಲೋಕೋಪಯೋಗಿ ಇಲಾಖೆ ಹೀಗೆ ಪ್ರತಿಯೊಂದು ಇಲಾಖೆಯ ಕಾಮಗಾರಿ, ನೇಮಕಾತಿಯಲ್ಲಿ ಬಿಜೆಪಿ ಸರ್ಕಾರ ಕಮಿಷನ್ ಹೊಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರ ಹಾಗೂ ಹಗರಣಗಳಿಗೆ ಸಂಬಂಧಿಸಿದಂತೆ ಇನ್ನೂ ಬಿಜೆಪಿ ಸರ್ಕಾರ ಉತ್ತರ ನೀಡಿಲ್ಲ. ಈ ಪ್ರಶ್ನೆ ಮಾಡಿದ ಕೆಂಪಣ್ಣ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದ ಅವರು, ಈ ಎಲ್ಲಾ ಪ್ರಶ್ನೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉತ್ತರ ಕೊಡಲಿ ಎಂದು ಸವಾಲ್ ಹಾಕಿದರು.
ಬಿಜೆಪಿ ಸರ್ಕಾರ ಕೇವಲ ಭರವಸೆಗಳ ಸರ್ಕಾರ, ಬಿ ರಿಪೋರ್ಟ್ ಸರ್ಕಾರ, ಚುನಾವಣೆ ಹತ್ತಿರ ಬಂದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಮೇಲಿಂದ ಮೇಲೆ ಬರುತ್ತಿದ್ದು, ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವಾಡುತ್ತಿವೆ. ಆದರೇ ಇದೀಗ ಲಂಬಾಣಿ ಜನರಿಗೆ ಮೋದಿಯವರು ಕಲಬುರ್ಗಿಯಲ್ಲಿ ಹಕ್ಕುಪತ್ರ ನೀಡಲು ಬಂದಿದ್ದಾರೆ. ಇದರಲ್ಕಿ ಏನು ವಿಶೇಷವಿಲ್ಲ ಎಂದರು.
ಚುನಾವಣೆ ಹೊಸ್ತಿಲಿನಲ್ಲಿ ಮೋದಿಯವರಿಗೆ ಈಗ ಏಕಾಏಕಿ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಬಂದಿದ್ದು, ಚುನಾವಣೆಗಾಗಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಲು ಮುಂದಾಗಿದ್ದಾರೆ. ಆದರೆ ಬಿಜೆಪಿಯವರು ಅಲ್ಪಸಂಖ್ಯಾತರ ಮೇಲೆ ಎಷ್ಟು ಕಾಳಜಿ ಇದೆ ಎಂಬುದು ನಮಗೆ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.