Breaking News

ನೈರುತ್ಯ ರೈಲ್ವೆಯಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ ಸಡಗರದಿಂದ ಆಚರಣೆ

•ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ಅವರು ಹುಬ್ಬಳ್ಳಿಯ ರೈಲ್ವೆ ಕ್ರೀಡಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಕವಾಯತು ವೀಕ್ಷಿಸಿದರು.

•ನೈರುತ್ಯ ರೈಲ್ವೆಯು ಪ್ರಮುಖ ಕಾರ್ಯಕ್ಷಮತೆಯ ನಿಯತಾಂಶಗಳಲ್ಲಿ ಭಾರತೀಯ ಎಲ್ಲಾ ರೈಲ್ವೆಯ ವಲಯಗಳಲ್ಲಿ ಮೊದಲನೇ ಸ್ಥಾನ ಮತ್ತು ಸಮಯಪಾಲನೆಯಲ್ಲಿ ಮೂರನೇ ಸ್ಥಾನ ಪಡೆದಿದೆ.

•ರೈಲ್ವೆ ಸಚಿವಾಲಯದ ನಾವೀನ್ಯತಾ (INNOVATION) ಸ್ಪರ್ಧೆಯಲ್ಲಿ ನೈರುತ್ಯ ರೈಲ್ವೆಯು ಎರಡನೇ ಸ್ಥಾನ ಗಳಿಸಿದೆ.

•ಜನವರಿಯಿಂದ ಡಿಸೆಂಬರ್ 2022ರ ಅವಧಿಯಲ್ಲಿ ನೈರುತ್ಯ ರೈಲ್ವೆಯ ಇತಿಹಾಸದಲ್ಲಿಯೇ ಒಂದೇ ವರ್ಷದಲ್ಲಿ ಅತ್ಯಧಿಕ (712 ಕಿ.ಮೀ) ವಿದ್ಯುದ್ದೀಕರಣ ಮಾಡಲಾಗಿದೆ.

ಹುಬ್ಬಳ್ಳಿಯ ಕ್ಲಬ್ ರಸ್ತೆಯ ರೈಲ್ವೆ ಕ್ರೀಡಾ ಮೈದಾನದಲ್ಲಿ ಗುರುವಾರ ನಡೆದ 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ಅವರು ಧ್ವಜಾರೋಹಣ ನೆರವೇರಿಸಿದರು.

ನೆರೆದ ಅಧಿಕಾರಿ-ಸಿಬ್ಬಂದಿವರ್ಗದವರನ್ನು ಉದ್ದೇಶಿಸಿ ಮಾತನಾಡಿದ ಅವರು, ನೈಋತ್ಯ ರೈಲ್ವೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರೈಲ್ವೆ ಇಲಾಖೆಯು ರಾಷ್ಟ್ರದ ಅಭಿವೃದ್ಧಿಯಲ್ಲಿ ಹಾಗೂ ಈ ಪ್ರದೇಶದ ಸಾಮಾಜಿಕ, ಆರ್ಥಿಕತೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ಭಾರತೀಯ ರೈಲ್ವೆಯಲ್ಲಿ ನೈರುತ್ಯ ರೈಲ್ವೆಯ ಸುರಕ್ಷತಾ ದಾಖಲೆಯು ಅತ್ಯುತ್ತಮವಾದುದಾಗಿದೆ ಎಂದ ಅವರು, ಪ್ರಮುಖ ಕಾರ್ಯಕ್ಷಮತೆ ನಿಯತಾಂಶಗಳು ಕೆಪಿಐ (ಇದು ಸ್ಥಳೀಯ ವಲಯದ ಕಾರ್ಯಕ್ಷಮತೆಯ ಮಾಪನದ ಸಂಕೀರ್ಣ ವ್ಯವಸ್ಥೆಯಾಗಿದ್ದು) ಡಿಸೆಂಬರ್ 2021ರಲ್ಲಿ 16 ನೇ ಸ್ಥಾನದಲ್ಲಿದ್ದ ನೈರುತ್ಯ ರೈಲ್ವೆಯು ಈಗ ಭಾರತೀಯ ರೈಲ್ವೆಯ ಎಲ್ಲಾ ವಲಯಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಈ ಆರ್ಥಿಕ ವರ್ಷದಲ್ಲಿ ನಮ್ಮ ಒಟ್ಟು ಮೂಲ ಆದಾಯ ₹ 5,808.30 ಕೋಟಿ ಇದ್ದು, ಕಳೆದ ವರ್ಷದ ಅವಧಿಗಿಂತ ಶೇ. 25% ರಷ್ಟು ಹೆಚ್ಚು ಆದಾಯ ಗಳಿಸಿದ್ದೇವೆ. ಹಬ್ಬ ಮತ್ತು ರಜಾದಿನಗಳಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು 213 ವಿಶೇಷ ರೈಲುಗಳನ್ನು ಓಡಿಸಲಾಗಿದ್ದು ಇದರಿಂದ ₹ 48.61 ಕೋಟಿ ಆದಾಯ ಗಳಿಸಿದೆ. ನವೆಂಬರ್ 2022ರಲ್ಲಿ 27 ವಿಶೇಷ ರೈಲುಗಳನ್ನು ಓಡಿಸಿದ್ದು, ಇದು ಒಂದೇ ತಿಂಗಳಲ್ಲಿ ಓಡಿಸಲಾದ ಅತಿ ಹೆಚ್ಚು ವಿಶೇಷ ರೈಲುಗಳಾಗಿವೆ. ಹಾವೇರಿಯಲ್ಲಿ ಆಯೋಜಿಸಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಪ್ರತಿನಿಧಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ನೈರುತ್ಯ ರೈಲ್ವೆಯು ಆರು ಜೋಡಿ ವಿಶೇಷ ರೈಲುಗಳನ್ನು ಓಡಿಸಿತ್ತಲ್ಲದೆ, ಏಳು ಎಕ್ಷಪ್ರೆಸ್‌ ರೈಲುಗಳಿಗೆ ತಾತ್ಕಾಲಿಕ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಮಯಪಾಲನೆಯಲ್ಲಿ ಭಾರತೀಯ ರೈಲ್ವೆಯ ಎಲ್ಲಾ ವಲಯಗಳ ಪೈಕಿ ನೈರುತ್ಯ ರೈಲ್ವೆ ಮೂರನೇ ಸ್ಥಾನವನ್ನು ಸಾಧಿಸಿದೆ ಎಂದು ಹೇಳಿದರು. ಮಾನ್ಯ ಪ್ರಧಾನಮಂತ್ರಿಗಳವರ ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಆನ್‌ಲೈನ್ ಕೋಚಿಂಗ್ ಇ-ಬ್ಯಾಲೆನ್ಸ್ ಶೀಟ್‌ನ್ನು ನೈರುತ್ಯ ರೈಲ್ವೆಯಲ್ಲಿರುವ ಎಲ್ಲಾ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ. 577 ಪಾಯಿಂಟ್-ಆಫ್-ಸೇಲ್ ಯಂತ್ರಗಳು ಮತ್ತು ವ್ಯವಹಾರಗಳ ಸುಲಭತೆಯನ್ನು ಸುಧಾರಿಸಲು, ನಗದುರಹಿತ ಮತ್ತು ಸಂಪರ್ಕರಹಿತ ವಹಿವಾಟು ಸುಲಭಗೊಳಿಸಲು 584 ಹ್ಯಾಂಡ್-ಹೆಲ್ಡ್ ಟರ್ಮಿನಲ್‌ಗಳನ್ನು ರೈಲುಗಳಲ್ಲಿ ಬಳಸಲಾಗುತ್ತಿದೆ. ನೈಋತ್ಯ ರೈಲ್ವೆಯ ನಿಲ್ದಾಣಗಳಲ್ಲಿ 87 ಹೊಸ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು ನಿಯೋಜಿಸಲಾಗಿದೆ.

2022 ರ ಅವಧಿಯಲ್ಲಿ ನೈರುತ್ಯ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಅಸಾಧಾರಣ ಬೆಳವಣಿಗೆಯನ್ನು ಸಾಧಿಸಿದೆ. ನೈರುತ್ಯ ರೈಲ್ವೆ ತನ್ನ ವಾಪ್ತಿಯಲ್ಲಿ 2022ರ ಜನವರಿಯಿಂದ ಡಿಸೆಂಬರ್ ರ ಅವಧಿಯಲ್ಲಿ 712 ರೈಲ್ವೆ ಕಿ.ಮೀ ವಿದ್ಯುದ್ದೀಕರಣ ಗೊಳಿಸಿದ್ದು, ಇದು ಒಂದು ವರ್ಷದಲ್ಲಿ ಅತ್ಯಧಿಕ ವಿದ್ಯುದ್ದೀಕರಣಗೊಳಿಸಿದ ದಾಖಲೆಯಾಗಿದೆ. ಪ್ರಸ್ತುತ ನೈರುತ್ಯ ರೈಲ್ವೆಯು 191 ಜೋಡಿ ರೈಲುಗಳಲ್ಲಿ 75 ಜೋಡಿ ರೈಲುಗಳು ವಿದ್ಯುತ್‌ ಚಾಲಿತ ರೈಲುಗಳಾಗಿವೆ. ಹಸಿರು ಶಕ್ತಿ ಬಳಕೆಯನ್ನು ಹೆಚ್ಚಿಸಲು ವಿವಿಧ ಕಟ್ಟಡಗಳು, ನಿಲ್ದಾಣಗಳು ಮತ್ತು ಎಲ್‌ಸಿ ಗೇಟ್‌ಗಳ ಮೇಲೆ 4,656 KWP ಮೇಲ್ಛಾವಣಿಯ ಸೌರ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಸೌರ ಘಟಕಗಳಿಂದ ಒಂದು ವರ್ಷಕ್ಕೆ ₹ 46.12 ಲಕ್ಷ ಯೂನಿಟ್‌ ಇಂಧನ ಉತ್ಪಾದಿಸುತ್ತಿದ್ದು, ಅಂದಾಜು ₹ 1.95 ಕೋಟಿ ಉಳಿತಾಯಕ್ಕೆ ಕಾರಣವಾಗಿದೆ.

ಮಿಷನ್ ರಫ್ತಾರ್ ಅಡಿಯಲ್ಲಿ 850 ಕಿ.ಮೀಗಳಲ್ಲಿ ವೇಗವನ್ನು 90 ಮತ್ತು 100 KMPH ನಿಂದ 110 KMPHಗೆ ಹೆಚ್ಚಿಸಲಾಗಿದೆ ಮತ್ತು ಲೂಪ್ ಲೈನ್ ವೇಗವನ್ನು 598 ಕಿ.ಮೀ ಗಳಲ್ಲಿ 30 KMPHಗೆ ಏರಿಸಲಾಗಿದೆ. ಇದು 2022ರ ಏಪ್ರಿಲ್ ನಿಂದ ಡಿಸೆಂಬರ್ ಅವಧಿಯಲ್ಲಿ ವರ್ಧಿತ ಚಲನಶೀಲತೆಗೆ ಕಾರಣವಾಗಿದೆ ಎಂದು ಅವರು ಹೇಳಿದರು. ವಿವಿಧ ಇಂಜಿನಿಯರಿಂಗ್ ಕಾಮಗಾರಿಗಳ ಪರಿಣಾಮವಾಗಿ 103 ರೈಲುಗಳ ವೇಗವನ್ನು ಹೆಚ್ಚಿಸಲಾಯಿತು. ಇದರಿಂದ ಒಟ್ಟು 2,371 ನಿಮಿಷಗಳ ಪ್ರಯಾಣದ ಸಮಯ ಉಳಿಯುತ್ತಿದೆ. ಈ ಅವಧಿಯಲ್ಲಿ, 4 ಜೋಡಿ ರೈಲುಗಳನ್ನು ಸೂಪರ್‌ಫಾಸ್ಟ್ ರೈಲುಗಳಾಗಿ ಪರಿವರ್ತಿಸಲಾಗಿದೆ.

ಪ್ರಯಾಣಿಕರ ಸೌಕರ್ಯಗಳ ವರ್ಧನೆಯು ಪ್ರಮುಖ ಆದ್ಯತೆಯಾಗಿದೆ. 28 ಪಾದಚಾರಿ(ಎಫ್‌ಒಬಿ) ಮತ್ತು 21 ಹೈ-ಲೆವಲ್‌ ಪ್ಲಾಟ್‌ಫಾರ್ಮ್‌ಗಳು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು. ಪ್ರಯಾಣಿಕರ ಸುರಕ್ಷತಾ ಹಿತದೃಷ್ಟಿಯಿಂದ 17 ನಿಲ್ದಾಣಗಳಲ್ಲಿ ವೀಡಿಯೊ ಕಣ್ಗಾವಲು (ಸಿಸಿಟಿವಿ) ವ್ಯವಸ್ಥೆಯನ್ನು ಅಳವಡಿಸಲಾಗಿದೆ. 44 ನಿಲ್ದಾಣಗಳಲ್ಲಿ ಸ್ವಯಂಚಾಲಿತ ಅಗ್ನಿಶಾಮಕ ಅಲಾರಾಂ ವ್ಯವಸ್ಥೆ ಕಲ್ಪಿಸಿದ್ದು, 36 ನಿಲ್ದಾಣಗಳಲ್ಲಿ ಪಿ.ಎ. ಸಿಸ್ಟಮ್‌ ಅಳವಡಿಸಲಾಗಿದ್ದು ಮತ್ತು 15 ನಿಲ್ದಾಣಗಳಲ್ಲಿ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಅಳವಡಿಸಲಾಗಿದೆ. ಜನವರಿಯಿಂದ ಡಿಸೆಂಬರ್ 2022 ರವರೆಗೆ ದಿವ್ಯಾಂಗರು ಮತ್ತು ಹಿರಿಯ ನಾಗರಿಕ ಪ್ರಯಾಣಿಕರ ಅನುಕೂಲಕ್ಕಾಗಿ 8 ಎಸ್ಕಲೇಟರ್‌ಗಳು ಮತ್ತು 18 ಲಿಫ್ಟ್‌ಗಳನ್ನು ನಿಯೋಜಿಸಲಾಗಿದೆ.

2021-22 ನೇ ವರ್ಷದಲ್ಲಿ ರೈಲ್ವೆ ಸಚಿವಾಲಯವು ಆಯೋಜಿಸಿದ್ದ ಅತ್ಯುತ್ತಮ ಆವಿಷ್ಕಾರಗಳ ಸಲಹೆ ಯೋಜನೆಯಲ್ಲಿ ನೈರುತ್ಯ ರೈಲ್ವೆ ಎರಡನೇ ಬಹುಮಾನ ಪಡೆದಿದೆ ಎಂದು ಶ್ರೀ ಕಿಶೋರ್ ಹೇಳಿದರು. ಈ ನಾವೀನ್ಯತೆ ಯೋಜನೆಯಡಿಯಲ್ಲಿ ಮೈಸೂರಿನ ಕೇಂದ್ರೀಯ ವರ್ಕ್‌ಶಾಪ್ ಎನ್‌ಎಂಜಿ ಬೋಗಿಗಳ ಒಳಗೆ ದ್ವಿಚಕ್ರ ವಾಹನಗಳ 2-ಹಂತದ ಲೋಡಿಂಗ್‌ ಮಾಡುವ ವ್ಯವಸ್ಥೆಗೆ ಕಾರಣೀಭೂತರಾದ ಸಹಕರಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಶ್ರೀ ಕಿಶೋರ್ ಅವರು ಅಭಿನಂದಿಸಿದರು. ನೈರುತ್ಯ ರೈಲ್ವೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇತ್ತೀಚೆಗೆ 1 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ದಾಖಲಿಸಿದೆ ಮತ್ತು ಡಿಜಿಟಲ್ ಮೀಡಿಯಾದಲ್ಲಿ ಬಲವಾದ ಧ್ವನಿಯಾಗಿ ಹೊರಹೊಮ್ಮಿದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು. ರಾಷ್ಟ್ರೀಯ ಮಟ್ಟದ ಕ್ರೀಡಾ ಸಾಧನೆಗಳಲ್ಲಿ ನೈರುತ್ಯ ರೈಲ್ವೆ ವಿಶೇಷ ಛಾಪು ಮೂಡಿಸಿದೆ ಎಂದು ಅವರು ಹೇಳಿದರು. ನಮ್ಮ ತಂಡಗಳು ನವದೆಹಲಿಯಲ್ಲಿ ನಡೆದ 59ನೇ ಅಖಿಲ ಭಾರತ ರೈಲ್ವೆ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್, ಗೋರಖ್‌ಪುರದಲ್ಲಿ ನಡೆದ 66ನೇ ಅಖಿಲ ಭಾರತ ರೈಲ್ವೆ ವಾಲಿಬಾಲ್ ಚಾಂಪಿಯನ್‌ಶಿಪ್, ಕೋಲ್ಕತ್ತಾದಲ್ಲಿ ನಡೆದ 63ನೇ ಅಖಿಲ ಭಾರತ ರೈಲ್ವೆ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್, ರಾಯ್ ಬರೇಲಿಯಲ್ಲಿ ನಡೆದ 86ನೇ ಅಖಿಲ ಭಾರತ ರೈಲ್ವೆ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್, ಮುಂಬಯಿಯಲ್ಲಿ ನಡೆದ 36ನೇ ಅಖಿಲ ಭಾರತ ರೈಲ್ವೇ ದೇಹದಾರ್ಢ್ಯ್ ಚಾಂಪಿಯನ್‌ಶಿಪ್‌ಗಳಲ್ಲಿ ಮೊದಲನೇ ಸ್ಥಾನ ಮತ್ತು ಅಖಿಲ ಭಾರತ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ನಮ್ಮ ಕ್ರೀಡಾಪಟುಗಳು ಅಥ್ಲೆಟಿಕ್ಸ್, ಸ್ವಿಮ್ಮಿಂಗ್, ಜ್ಯೂಡೋ, ಶೂಟಿಂಗ್, ಸೈಕ್ಲಿಂಗ್ ಹಾಗೂ ಬ್ಯಾಸ್ಕೆಟ್‌ಬಾಲ್‌ ಸೇರಿದಂತೆ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಹಲವಾರು ಪದಕಗಳನ್ನು ಜಯಸಿದ್ದಾರೆ.

ಸೌಟ್ಸ್ ಮತ್ತು ಗೈಡ್ಸ್, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ವಿಭಾಗದ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆರ್‌ಪಿಎಫ್ ಸಿಬ್ಬಂದಿಯ ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿತ್ತು. SWRWWO ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಡಾ.ವಂದನಾ ಶ್ರೀವಾಸ್ತವ, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ಹರ್ಷ ಖರೆ, ನೈರುತ್ಯ ರೈಲ್ವೆ ಪ್ರಧಾನ ಮುಖ್ಯ ಭದ್ರತಾ ಅಧಿಕಾರಿ ಶ್ರೀ ಅಲೋಕ್ ಕುಮಾರ್, ನೈರುತ್ಯ ರೈಲ್ವೆ ಪ್ರಧಾನ ಮುಖ್ಯ ಕಾರ್ಮಿಕ ಅಧಿಕಾರಿ ಶ್ರೀ ಅಲೋಕ್ ಕುಮಾರ್, ನೈಋತ್ಯ ರೈಲ್ವೆಯ ಎಲ್ಲಾ ಇಲಾಖೆಗಳ ಪ್ರಧಾನ ಮುಖ್ಯಸ್ಥರು, ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಬಳಿಕ ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆ (SWRWWO)ಯ ಶಾಲೆಯಲ್ಲಿ ಅಧ್ಯಕ್ಷೆ ಶ್ರೀಮತಿ ಡಾ.ವಂದನಾ ಶ್ರೀವಾಸ್ತವ ಅವರು ಧ್ವಜಾರೋಹಣ ನೆರವೇರಿಸಿದರು. ತದನಂತರ SWRWWOನ ಸಂಸ್ಥೆಯ ವತಿಯಿಂದ ಕೇಂದ್ರೀಯ ರೈಲ್ವೆ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲಗಳನ್ನು ವಿತರಿಸಲಾಯಿತು.

Share News

About BigTv News

Check Also

ಹುಬ್ಬಳ್ಳಿ-ಧಾರವಾಡದಲ್ಲಿ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ

ಧಾರವಾಡ : ಹು-ಧಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಮಾರ್ಗದರ್ಶನದಲ್ಲಿ ಆಯುಕ್ತ ಡಾ: ಸಂತೋಷಕುಮಾರ ಬಿರಾದಾರ ಅವರು …

Leave a Reply

Your email address will not be published. Required fields are marked *

You cannot copy content of this page