ಹುಬ್ಬಳ್ಳಿ, ಜ.28- ನಗರಕ್ಕೆ ಇಂದು (ಶನಿವಾರ) ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರೈತಪರ ಹೋರಾಟಗಾರರು ನಗರದ ಕಿತ್ತೂ ಚೆನ್ನಮ್ಮ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ರೈತ ಪರ ಹೋರಾಟಗಾರ ಸಿದ್ಧು ತೇಜಿ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಈ ಕೂಡಲೇ ಉತ್ತರ ಕರ್ನಾಟಕದ ಜನತೆಯ ಹಲವಾರು ವರ್ಷಗಳ ಬೇಡಿಕೆಯಾದ ಕಳಸಾ- ಬಂಡೂರಿ ಮಹದಾಯಿ ಯೋಜನೆ ಕೇವಲ ಕಾಗದದಲ್ಲಿ ಮಾತ್ರ ಅನುಮೋದನೆ ನೀಡದೇ ಮುಂಬರುವ ರಾಜ್ಯ ಮತ್ತು ಕೇಂದ್ರ್ ಬಜೆಟ್ ನಲ್ಲಿ ಹಣ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಮಾತನಾಡಿದ ಮತ್ತೋರ್ವ ರೈತಪರ ಹೋರಾಟಗಾರ ಬಾಬಾಜಾನ್ ಮುಧೋಳ, ಇನ್ನು ಎಷ್ಟು ದಿನ ಅಂತ ನಾವು ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಪ್ರಶ್ನಿಸಿ ಕೂಡಲೇ ಸರಕಾರವು ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮತ್ತೋರ್ವ ಯುವ ನಾಯಕ ಹಾಗೂ ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಹು-ಧಾ ಸೆಂಟ್ರಲ್ (73) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ನಿಯೋಜಿತ ಅಭ್ಯರ್ಥಿ ಎಸ್ ಎಸ್ ಕೆ ಶ್ರೀ ಸಹಸ್ರಾರ್ಜುನ ಸೋಮವಂಶ ಕ್ಷತ್ರೀಯ ಸಮಾಜದ ಧಾರವಾಡ ಜಿಲ್ಲಾ ಯುವ ಘಟಕದ ಅಧ್ಯಕ್ಷ, ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ರಾಜು ಅನಂತಸಾ ನಾಯಕವಾಡಿ ಮಾತನಾಡಿ, ಕೇಂದ್ರ ಸರಕಾರದ ಧೋರಣೆಯಿಂದ ಇಂದು ಜನಸಾಮಾನ್ಯರು ಬದುಕು ನಡೆಸುವುದು ಕಷ್ಟವಾಗಿದೆ. ಸಿಲಿಂಡರ್, ಪೆಟ್ರೋಲ್, ಡಿಸೇಲ್ ಹಾಗೂ ದಿನನಿತ್ಯದ ಬಳಕೆಯ ವಸ್ತುಗಳು ತುಟ್ಟಿಯಾಗಿ ಬಡಜನತೆ ಮತ್ತಷ್ಟು ಬಡವರಾಗುತ್ತಿದ್ದಾರೆ. ಉಳ್ಳವರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಚುನಾವಣೆಯಲ್ಲಿ ಜನತೆ ಎರಡೂ ಸರಕಾರಗಳಿಗೆ ಮತದಾನದಲ್ಲಿ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಬುದ್ಧಿಮಾತು ಹೇಳಿದರು.
ಕುಬೇರ ಪವಾರ ಸೇರಿದಂತೆ ಮತ್ತಿತರ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ಸದಸ್ಯರು, ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
