ಹುಬ್ಬಳ್ಳಿ : ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಸಂಘಟಿತ ಕಾರ್ಮಿಕರ ಒಕ್ಕೂಟ ಇದರ ಸಹಯೋಗದಲ್ಲಿ ಬಸವಶ್ರೀ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಫೆಬ್ರವರಿ ೧೨ ರಂದು ಕಾರ್ಮಿಕರ ಸಚಿವರ ಮನೆ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ದುರ್ಗಪ್ಪ ಚಿಕ್ಕತುಂಬಳ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ೧೪ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಿದ್ದು, ಆದರೆ ಇದರಲ್ಲಿ ಕೆಲ ಸೌಲಭ್ಯಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂದಿನ ಕಾರ್ಮಿಕ ಸಚಿವರ ಮನೆ ಚಲೋ ಕಾರ್ಯಕ್ರಮದಲ್ಲಿ, ರಾಜ್ಯದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಲ್ಲಿ ಶೇ. ೩೦% ರಷ್ಟು ಟೈಲ್ಸ್ ಕಾರ್ಮಿಕರಿದ್ದು ಅವರಿಗೆ ಇದುವರೆಗೂ ಯಾವುದೇ ಟೂಲ್ ಕಿಟ್ ನೀಡಿಲ್ಲ. ಅಲ್ಲದೇ ಟೈಲ್ಸ್ ಕಾರ್ಮಿಕರನ್ನು ಕಡೆಗಣಿಸಿದ್ದು ಖಂಡನೀಯವಾಗಿದೆ. ಟೈಲ್ಸ್ ಕಾರ್ಮಿಕರಿಗೆ ಕೂಡಲೇ ಕಿಟ್ ನೀಡಬೇಕು.
ಹಿರಿಯ ಕಾರ್ಮಿಕರಿಗೆ ಪಿಂಚಣಿ ಯೋಜನೆ ಅರ್ಜಿ ಸಲ್ಲಿಕೆಗೆ ಮತ್ತೆ ನಿರ್ಬಂಧ ಹೇರಿದ್ದು, ಕೂಡಲೇ ಇದನ್ನು ಕೈ ಬಿಡಬೇಕು, ಸೇವಾಸಿಂಧು ತಂತ್ರಾಂಶದಲ್ಲಿ ಪದೇ ಪದೇ ದೋಷ ಉಂಟಾಗಿದ್ದು, ಕೂಡಲೇ ಈ ಸಮಸ್ಯೆಯನ್ನು ಸರಿಪಡಿಸಬೇಕು ಅಥವಾ ಪರ್ಯಾಯ ಕಲ್ಪಿಸಬೇಕು. ನೊಂದಾಯಿತ ಎಲ್ಲಾ ಕಾರ್ಮಿಕರಿಗೆ ಬಸ್ ಪಾಸ್ ವಿತರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭೀಮಪ್ಪ ಮೇಲಿನಮನಿ, ರಾಮಣ್ಣ ಪೂಜಾರ, ಚಂದ್ರಶೇಖರ ಶಿಶನಳ್ಳಿ, ಮಲ್ಲಿಕಾರ್ಜುನ ಗುಡ್ಡಪ್ಪನವರ, ಉಮೇಶ ಧಾರವಾಡ, ಗದಿಗೆಯ್ಯಾ ಚಿಕ್ಕಮಠ ಉಪಸ್ಥಿತರಿದ್ದರು.