ಹುಬ್ಬಳ್ಳಿ:ಜಲ್ ಜೀವನ್ ಮಿಷನ್ ಯೋಜನೆಯ ಅಭಿಯಾನದ ಅಂಗವಾಗಿ ಧಾರವಾಡ ಲೋಕಸಭಾ ಕ್ಷೇತ್ರದ ಕಲಘಟಗಿ ತಾಲೂಕಿನ ನೀರಸಾಗರ ಗ್ರಾಮಸ್ಥರ ಜೀವನದಲ್ಲಿ ಆಗಿರುವ ಗುಣಾತ್ಮಕ ಬದಲಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.ಹೌದು..ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ ಜೋಶಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಅಭಿಯಾನದ ಯಶಸ್ಸನ್ನು ಉಲ್ಲೆಖಿಸಿ, ನೀರಸಾಗರ ಗ್ರಾಮಸ್ಥರ ಜೀವನದಲ್ಲಿ ಕಂಡುಬಂದಿರುವ ಗುಣಾತ್ಮಕ ಬದಲಾವಣೆ ಕುರಿತು ಹಂಚಿಕೊಂಡಿದ್ದ ಅಭಿಪ್ರಾಯಕ್ಕೆ ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೀಟ್ವಿಟ್ ಮಾಡಿ, ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಈ ಕುರಿತು ಜಲ್ ಜೀವನ್ ಮಿಷನ್ ಯೋಜನೆ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ ಅವರು, ಜಿಲ್ಲೆಯಲ್ಲಿರುವ 388 ಜನವಸತಿ ಪ್ರದೇಶಗಳ ಪೈಕಿ, 284 ಜನವಸತಿ ಪ್ರೇಶಗಳಲ್ಲಿ ಸಂಪೂರ್ಣವಾಗಿ ಜಲ್ ಜೀವನ್ ಮಿಷನ್ ಯೋಜನಾ ಕಾಮಗಾರಿಗಳು ಪೂರ್ಣವಾಗಿವೆ, ಉಳಿದಂತೆ 104 ಜನವಸತಿ ಪ್ರದೇಶಗಳಲ್ಲಿನ ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟು 363 ಕೋಟಿ ಅನುದಾನ ಬಿಡುಗಡೆಯಾಗಿದ್ದು ಇಲ್ಲಿಯವರೆಗೆ 259 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಜಲ್ ಜೀವನ್ ಮಿಷನ್ ಅಡಿ ಇಲ್ಲಿಯವರೆಗೆ 1,15,582 ಕುಡಿಯುವ ನೀರಿನ ನಳ ಸಂಪರ್ಕಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.