ಹುಬ್ಬಳ್ಳಿ: ಟಿಬೇಟಿಯನ್ ಚೇಂಬರ್ ಆಫ್ ಕಾಮರ್ಸ್ ಆಶ್ರಯದಲ್ಲಿ ಟಿಬೇಟ್ ಫೆಸ್ಟಿವಲ್ ಟಿಬೆಟ್ ಹಬ್ಬವನ್ನು ಫೆ.27 ರಿಂದ ಮಾ.5 ರವರೆಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಬಳಿಯ ಡುಗುಲಿಂಗ್ ಟಿಬೇಟಿಯನ್ ಪುನರ್ವಸತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟಿಬೇಟಿಯನ್ ಚೇಂಬರ್ ಆಫ್ ಕಾಮರ್ಸ್’ನ ಸಿ.ಇ.ಓ ಸೆರಿನ್ ಪೋಪಿಯಾಲ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಬೇಟಿಯನ್ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದು ಟಿಬೇಟ್ ಹಬ್ಬ ಕ್ಯಾಂಪ್ ನಂ.3 ರಲ್ಲಿನ ಲ್ಹಾವೋ ತ್ಸೋಕ್ಪಾ ಮೈದಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಟಿಬೇಟಿಯನ್ ಪಾರಂಪರಿಕ ಸಂಗೀತ, ನೃತ್ಯ ಲಾಮಾಗಳಿಂದ ಮಂಡಲದ ರಚನೆ, ಢಾಂಕಾ ಪೇಟಿಂಗ್, ಟಿಬೇಟಿಯನ್ ಕರಕುಶಲ ವಸ್ತುಗಳು, ಆಹಾರದ ಮಾರಾಟ ಮಳಿಗೆಗಳು ಇರಲಿವೆ. ಜೊತೆಗೆ ಪಾರಂಪರಿಕ ವೈದ್ಯಕೀಯ ಕ್ಯಾಂಪ್ ಹಾಗೂ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದರು. ಇನ್ನು ಈ ಒಂದು ಟಿಬೇಟಿಯನ್ ಹಬ್ಬ ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೇ ಟಿಬೇಟಿಯನ್ ಬುದ್ದಿಸಂ, ಟಿಬೇಟಿಯನ್ ವೈದ್ಯಕೀಯ ಪದ್ದತಿ, ಟಿಬೇಟಿಯನ್ ಸದ್ಯದ ರಾಜಕೀಯ ಪರಿಸ್ಥಿತಿ ಸೇರಿದಂತೆ ಮುಂತಾದ ವಿಷಯಗಳ ಕುರಿತಾಗಿ ಉಪನ್ಯಾಸ, ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈ ಕಾರ್ಯಕ್ರಮದ ಮೂಲಕ ಕಲಾವಿದರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು, ಕುಶಲಕರ್ಮಿಗಳಿಗೆ ತಮ್ಮ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಒಂದು ವಾರಗಳ ಕಾಲ ನಡೆಯಲಿದ್ದು, ಈ ಸಂದರ್ಭದಲ್ಲಿ ಟಿಬೇಟಿಯನ್ ಕ್ಯಾಂಪ್ ಸುತ್ತಮುತ್ತಲಿನ ಪ್ರದೇಶ, ನಗರಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶಿಷ್ಠವಾದ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರೋತ್ಸಾಹಿಸಬೇಕೇಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೋರ್ ಗ್ರೂಪ್ ಫಾರ್ ಟಿಬೇಟ್ ರಾಷ್ಟ್ರೀಯ ಸಹ ಸಂಯೋಜಕರಾದ ಅಮೃತ ಜೋಶಿ ಇದ್ದರು.
