ಕಾಂಗ್ರೆಸ್‌ನಿಂದ ಮಾರ್ಚ್ 9ರಂದು ಕರ್ನಾಟಕ ಬಂದ್ ಕರೆ ವಿಚಾರವಾಗಿ ಹುಬ್ಬಳ್ಳಿ ನಿವಾಸದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್ಸಿನ ಕೈ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರ ಬಿಟ್ಟಿಲ್ಲ. ಎಂ.ಬಿ.ಪಾಟೀಲ್, ಜಾರ್ಜ್, ಮಹದೇವಪ್ಪಗೆ ಕೇಳಬೇಕು ಸಿದ್ದರಾಮಯ್ಯ ಎಷ್ಟೆಲ್ಲ ಟಾರ್ಗೆಟ್ ಕೊಟ್ಟಿದ್ದರು ಅಂತ. ಭ್ರಷ್ಟಾಚಾರದ ಕೂಪದಲ್ಲಿ ಇರುವವರು ಆಪಾದನೆ ಮಾಡಿದರೆ ನಡೆಯಲ್ಲ. ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಬಂದ್ ಆಗುತ್ತಿದೆ. ಹೀಗಾಗಿ ರಾಜ್ಯ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ ಎಂದರು. ಆಪಾದನೆ ಮಾಡುವವರು ಮೊದಲು ಶುದ್ಧ ಹಸ್ತರೀರಬೇಕು. ಆವಾಗ ಅದಕ್ಕೆ ಬೆಲೆ ಬರುತ್ತದೆ ಎಂದು ಸಿಎಂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಬೆಳಗಾವಿ ರಾಜಹಂಸಗಡದಲ್ಲಿ ಕಾಂಗ್ರೆಸ್‌ನಿಂದ ಶಿವಾಜಿ ಪ್ರತಿಮೆ ಮರು ಉದ್ಘಾಟನೆ ಪ್ರಕರಣದ ಕುರಿತು ಮಾತನಾಡಿದ ಅವರು, ಇದೊಂದು ಹಾಸ್ಯಾಸ್ಪದ ಸಂಗತಿ. ಸರ್ಕಾರವೇ ಬಂದು ಮೂರ್ತಿ ಉದ್ಘಾಟನೆ ಮಾಡಿದ ಮೇಲೆ ಈ ರೀತಿ ಮಾಡೋದು ಸರಿಯಲ್ಲ. ಸರ್ಕಾರದಿಂದ ಉದ್ಘಾಟನೆ ಮಾಡಿದ ನಂತರ ಒಣ ಪ್ರತಿಷ್ಠೆಗಾಗಿ ಈ ರೀತಿ ಮಾಡಲಾಗಿದೆ. ರಾಷ್ಟ್ರನಾಯಕರ ಹೆಸರಲ್ಲಿ ಈ ರೀತಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಮಾಡಿದ ಕರ್ಮಕಾಂಡ ಒಂದಾ ಎರಡಾ..? ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆದುಕೊಳ್ಳಬಹುದು ಎನ್ನುವುದು ಮೂರ್ಖತನ. ಚುನಾವಣಾ ಅಖಾಡವಿದೆ ಜನರೇ ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದರು. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಐಎಸ್ ಕೆಪಿ ಹೊಣೆಹೊತ್ತ ವಿಚಾರವಾಗಿ ಮಾತನಾಡಿದ ಅವರು, ಈಗ ಡಿಕೆಶಿ ಏನು ಹೇಳ್ತಾರೆ ಕೇಳಬೇಕು. ಬರೀ ಸಾಧಾ ಕುಕ್ಕರ್ ಅಂತ ಡಿಕೆಶಿ ಹೇಳಿದ್ದರು. ಬಿಜೆಪಿಯವರು ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಅಂತಾ ಹೇಳಿದ್ದರು. ಈಗ ಈ ವಿಚಾರಕ್ಕೆ ಡಿಕೆಶಿ ಏನು ಹೇಳ್ತಾರೆ ಪ್ರಶ್ನೆ ಕೇಳಿ ಎಂದು ಸಿಎಂ ಹೇಳಿದರು.
