Breaking News

H3N2 ವೈರಸ್‌ ಸೋಂಕು: ಜನರಿಗೆ ಮುನ್ನೆಚ್ಚರಿಕೆ

ಎಚ್‌3ಎನ್‌2 ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ, ತಾಂತ್ರಿಕ ಸಮಿತಿ ಹಾಗೂ ಹಿರಿಯ ಅಧಿಕಾರಿಗೊಳೊಂದಿಗೆ ಸಚಿವರು ಸಭೆ ನಡೆದಿದ್ದು, H3N2 ವೈರಸ್‌ ಸೋಂಕುಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿಲ್ಲ. ಎಲ್ಲಾ ಆಸ್ಪತ್ರೆಗಳ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕೆಂದು ಸೂಚನೆ ನೀಡಿ ಆದೇಶ ಹೊರಡಿಸಲಾಗುವುದು. ಹಾಗೆಯೇ ಜನರು ಮುನ್ನೆಚ್ಚರಿಕೆ ವಹಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇನ್‌ಫ್ಲುಯೆಂಜಗೆ ಪ್ರತಿ ವರ್ಷ ಲಸಿಕೆ ನೀಡುತ್ತಿದ್ದು, ಇದನ್ನು ಎಲ್ಲಾ ಆರೋಗ್ಯ ಸಿಬ್ಬಂದಿ ಪಡೆಯಲು ಲಿಖಿತ ಸೂಚನೆ ನೀಡಲಾಗುವುದು. ಪ್ರತಿ ವಾರ 25 ಪರೀಕ್ಷೆ ಮಾಡಬೇಕೆಂದು ಕೇಂದ್ರ ಸರ್ಕಾರ ಗುರಿ ನೀಡಿದೆ. ಬೆಂಗಳೂರಿನ ವಿಕ್ಟೋರಿಯಾ ಹಾಗೂ ವಾಣಿ ವಿಲಾಸ ಆಸ್ಪತ್ರೆಗಳಲ್ಲಿ ಸಾರಿ ಹಾಗೂ ಐಎಲ್‌ಐ ಪ್ರಕರಣಗಳ ಪೈಕಿ 25 ಮಂದಿಗೆ ಈ ಪರೀಕ್ಷೆ ಮಾಡಿ ಯಾವ ಪ್ರಭೇದದ ವೈರಾಣು ಎಂದು ಪತ್ತೆ ಮಾಡಲಾಗುವುದು ಎಂದರು. ಐಸಿಯುನಲ್ಲಿ ಕೆಲಸ ಮಾಡುವವರು ಸೇರಿದಂತೆ ಕೆಲ ನಿರ್ದಿಷ್ಟ ವೈದ್ಯರು, ಸಿಬ್ಬಂದಿಗೆ ಸರ್ಕಾರದಿಂದಲೇ ಲಸಿಕೆ ನೀಡಲಾಗುವುದು. 2019 ರವರೆಗೆ ಈ ಲಸಿಕೆ ನೀಡಲಾಗುತ್ತಿತ್ತು. ಕೋವಿಡ್‌ ಬಂದ ಬಳಿಕ ನೀಡಿಲ್ಲ. ಈಗ ಮತ್ತೆ ಅದನ್ನು 31 ಜಿಲ್ಲೆಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು. 15 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಲ್ಲಿ, 65 ವರ್ಷ ಮೇಲ್ಪಟ್ಟ ವೃದ್ಧರಿಗೆ ಈ ಸೋಂಕು ಕಂಡುಬರಬಹುದು. ಗರ್ಭಿಣಿಯರಿಗೂ ಸೋಂಕು ಬರುವ ಸಾಧ್ಯತೆ ಹೆಚ್ಚಿದೆ. ಶುಚಿತ್ವ, ಗುಂಪುಗೂಡುವುದನ್ನು ತಡೆಯುವುದು, ಕೈಗಳ ಸ್ವಚ್ಛತೆ ಮೊದಲಾದ ಕ್ರಮಗಳ ಮೂಲಕ ಸೋಂಕು ಹರಡುವುದನ್ನು ತಡೆಯಬಹುದು ಎಂದರು. ಬೇಸಿಗೆಯ ಆರಂಭಕ್ಕೆ ಮುನ್ನವೇ ಫೆಬ್ರವರಿಯಲ್ಲೇ ತಾಪಮಾನ ಹೆಚ್ಚಾಗಿದೆ. ಇದರಿಂದ ಸಮಸ್ಯೆ ಹೆಚ್ಚುತ್ತಿದೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಬಿಸಿಲಲ್ಲಿ ಓಡಾಡುವುದು ತಪ್ಪಿಸಬೇಕು. ಕನಿಷ್ಠ 2-3 ಲೀಟರ್‌ ನೀರು, ಮಜ್ಜಿಗೆ, ಎಳನೀರು, ಶರಬತ್‌ ಕುಡಿಯುವುದೊಳಿತು. ದೇಹದಲ್ಲಿ ನೀರು ಕಡಿಮೆ ಆಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು. ಜನವರಿಯಿಂದ ಮಾರ್ಚ್‌ವರೆಗೆ ಎಚ್‌1ಎನ್‌1 ನ 20 ಪ್ರಕರಣಗಳು ಪತ್ತೆಯಾಗಿವೆ. ಎಚ್‌3ಎನ್‌2 ನ 26 ಪ್ರಕರಣ ಪತ್ತೆಯಾಗಿದೆ. ಇನ್‌ಫ್ಲುಯೆಂಜ ಬಿ 10, ಅಡಿನೋ 69 ಪ್ರಕರಣ ಕಂಡುಬಂದಿದೆ. ಅನೇಕರು ಆಂಟಿ ಬಯಾಟಿಕ್‌ ಮಾತ್ರೆಗಳನ್ನು ಸೇವಿಸುತ್ತಿದ್ದಾರೆ. ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವಿಸುವುದು, ಅನಗತ್ಯವಾಗಿ ಆಂಟಿ ಬಯಾಟಿಕ್‌ ಸೇವಿಸುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ. ಇದಕ್ಕೆ ಸಿಂಪ್ಟಮೆಟಿಕ್‌ ಚಿಕಿತ್ಸೆ ನೀಡಲಾಗುತ್ತದೆ. ಅಗತ್ಯ ಔಷಧಿಗಳನ್ನು ದಾಸ್ತಾನು ಮಾಡಲಾಗಿದೆ. ಔಷಧಿಯ ಕೊರತೆ ಇಲ್ಲ ಎಂದು ತಿಳಿಸಿದರು. ಈ ಸೋಂಕು ಬಂದರೆ 2-5 ದಿನದೊಳಗೆ ನಿವಾರಣೆಯಾಗುತ್ತದೆ. ಕೋವಿಡ್‌ಗೊಳಗಾದವರಿಗೆ ಸೋಂಕು ಬಂದರೆ ಹೆಚ್ಚು ಕೆಮ್ಮು ಇರುತ್ತದೆ. ಬೆಂಗಳೂರಿನಲ್ಲಿ ಈ ಸೋಂಕಿನ ಎರಡು ಪ್ರಕರಣಗಳು ಕಂಡುಬಂದಿವೆ ಎಂದರು. ಕಡಿಮೆ ದರದಲ್ಲಿ ಪರೀಕ್ಷೆ ಮಾಡುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಬಂದ ಬಳಿಕ ಪರೀಕ್ಷೆಗೆ ದರ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.

Share News

About admin

Check Also

ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ ಯಶಸ್ವಿ

ಹುಬ್ಬಳ್ಳಿ:ಕಿಮ್ಸ್ ನ ನಿರ್ದೇಶಕರಾದ ಡಾ.ರಾಮಲಿಂಗಪ್ಪ ಅಂತರಥಾನಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು,ಈಗಾಗಲೇ ಬೇರೆ ರಾಜ್ಯ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹೊಂದಾಣಿಕೆಯಾಗದ ರಕ್ತದ ಗುಂಪಿನ …

Leave a Reply

Your email address will not be published. Required fields are marked *

You cannot copy content of this page