ಬೆವಿಕಂ ವ್ಯಾಪ್ತಿಯ ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ಜಿಲ್ಲೆ, ಕಚೇರಿ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನರವೇರಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸುಮಾರು 16 ಸಾವಿರ ಕೋಟಿ ರೂ.ಗಳ ವಿದ್ಯುತ್ ಸಬ್ಸಿಡಿಯನ್ನು ನೀಡಿದ್ದರೂ ಎಸ್ಕಾಂಗಳು ಸಾಲದಲ್ಲಿದೆ ಎಂದರು. ಕಳೆದ ಒಂದೂವರೆ ವರ್ಷದಲ್ಲಿ ಇಂಧನ ಕ್ಷೇತ್ರಕ್ಕೆ 9 ಸಾವಿರ ರೂ.ಗಳನ್ನು ನೀಡಲಾಗಿದೆ. ಎಸ್ಕಾಮ್ ಹಾಗೂ ಕರ್ನಾಟಕ ವಿದ್ಯುತ್ ನಿಗಮಕ್ಕೆ ವಿಶೇಷ ಅನುದಾನ ನೀಡಲಾಗಿದೆ. ಬೇಸಿಗೆಯಲ್ಲಿ ವಿದ್ಯುಶ್ಚಕ್ತಿಯ ನಿರ್ವಹಣೆ ಹಾಗೂ ಸಿದ್ಧತೆ, ವಿದ್ಯುತ್ ಉತ್ಪಾದನೆ ಹಾಗೂ ಸಂಗ್ರಹಣೆ ಮಾಡುವುದು ಹಾಗೂ ಹೆಚ್ಚುವರಿ ವಿದ್ಯುತ್ ನ್ನು ಮಾರಾಟ ಮಾಡಿ 2500 ಕೋಟಿ ಲಾಭಾಂಶವನ್ನು ಪಡೆಯಲಾಗಿದೆ. ರೈತ, ಉದ್ಯಮಿ, ಬೀದಿಬದಿ ವ್ಯಾಪಾರಿ ಸೇರಿದಂತೆ ವಿದ್ಯುಚ್ಛಕ್ತಿಯ ಎಲ್ಲ ವರ್ಗದ ಗ್ರಾಹಕರಿಗೆ ಸಮರ್ಪಕವಾದ ಸೇವೆಯನ್ನು ನೀಡಲಾಗುತ್ತಿದೆ. ಬೇಸಿಗೆಯ ಕಾಲದಲ್ಲಿ ಹೆಚ್ಚಿನ ಸಂಖ್ಯೆಯ ಟ್ರಾನ್ಸಫಾರ್ಮರ್ ಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದೆ ಎಂದರು. ಪವರ್ ನಲ್ಲಿ ಪವರ್ ಪೊಲಿಟಿಕ್ಸ್ ನಡೆಯುತ್ತಿದೆ. ಪೂರಕವಾದ ಇಂಧನ ನೀತಿಯಿರದ ಕಾರಣ, ವಿದ್ಯುತ್ಛಕ್ತಿ ಇಲಾಖೆಯನ್ನು ಪೊಲಿಟಿಕಲ್ ಪವರ್ ಬಳಿಸಿ ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿ, ವಿದ್ಯುತ್ ಕ್ಷೇತ್ರದಲ್ಲಿ ನಷ್ಟ ಅನುಭವಿಸುವಂತಾಯಿತು. ಇಂಧನ ಕ್ಷೇತ್ರದಲ್ಲಿ ಆಗುತ್ತಿರುವ ನಷ್ಟವನ್ನು ವೈಜ್ಞಾನಿಕವಾಗಿ ಲೆಕ್ಕಹಾಕಬೇಕಿದೆ. ಈ ನಿಟ್ಟಿನಲ್ಲಿ ಸುಧಾರಣೆಗಳಾಗಬೇಕಿದೆ ಎಂದರು.. ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಯಡಿ ಬಡಜನರಿಗೆ 40 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಗೃಹೋಪಯೋಗದಲ್ಲಿ ಸಾಧಾರಣವಾಗಿ ಗರಿಷ್ಟ 60-70 ಯೂನಿಟ್ ಖರ್ಚಾಗುತ್ತದೆ. ಆದರೆ, ಸುಮ್ಮನೆ 200 ಯುನಿಟ್ ಉಚಿತ ಕೊಡುತ್ತೇವೆ ಎಂದು ಹೇಳುವುದರಲ್ಲಿ ಏನು ಅರ್ಥ ಇದೆ. ಆದ್ದರಿಂದ ಇಂಧನ ಕ್ಷೇತ್ರದಲ್ಲಿ ಪವರ್ ಪಾಲಿಟಿಕ್ಸ್ ಮಾಡಬಾರದು. ಇದು ಜನರಿಗೆ ಮೋಸ ಮಾಡುವ ತಂತ್ರ ಎಂದರು. ನವೀಕರಿಸಬಹುದಾದ ಇಂಧನ ಬಳಕೆಗೆ ಪಂಪ್ ಸ್ಟೋರೇಜ್ ಅಗತ್ಯ ವಿದ್ಯುತ್ ಸ್ಟೋರೇಜ್ ಸಲುವಾಗಿ ಸೋಲಾರ್ ಬ್ಯಾಟರಿಗಳ ತಯಾರಿಕೆಗೆ ಆದ್ಯತೆ ನೀಡುತ್ತಿದ್ದೇವೆ. ಒಂದು ಕಡೆ ವಿದ್ಯುತ್ ಉತ್ಪಾದನೆ ಹಾಗೂ ಅದರ ಸಮರ್ಪಕ ವಿತರಣೆ ಹಾಗೂ ಸದಾ ಮೇಲ್ದರ್ಜೇರಿಸುತ್ತಿರುವುದು. ಮತ್ತೊಂದೆಡೆ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಮಾತ್ರ ನಮ್ಮ ಭವಿಷ್ಯದ ಇಂಧನ ಉತ್ತಮವಾಗಲಿದೆ ಎಂದರು. ಇಂಧನ ಸಚಿವ ಸುನೀಲ್ ಕುಮಾರ್, ಶಾಸಕ ಹಾಗೂ ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಸತೀಶ್ ರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ್ ಬೀಳಗಿ ಉಪಸ್ಥಿತರಿದ್ದರು. ವಿದ್ಯುತ್ ಉತ್ಪಾದನೆ, ಹಂಚಿಕೆ, ವಿತರಣೆಯಲ್ಲಿ ದಕ್ಷತೆ, ನಷ್ಟ ತಡೆಯಲು ಹಾಗೂ ಇಂಧನ ಇಲಾಖೆಯ ಆರ್ಥಿಕ ಸದೃಢತೆಗೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
