ಚಿಕ್ಕಬಳ್ಳಾಪುರ: ಸತ್ಯಸಾಯಿ ಲೋಕಸೇವಾ ಸಂಸ್ಥೆ 350 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಖಾಸಗಿ ಮೆಡಿಕಲ್ ಕಾಲೇಜು ಉದ್ಘಾಟನೆ ನಿಮಿತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸಲಿದ್ದಾರೆ. ಸತ್ಯಸಾಯಿ ಗ್ರಾಮದಲ್ಲಿ ವಿನೂತನ ಶೈಲಿಯಲ್ಲಿ 350 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಟ್ಟಡಕ್ಕೆ ಶ್ರೀ ಸತ್ಯಸಾಯಿ ರಾಜೇಶ್ವರಿ ಕಟ್ಟಡ ಎಂದು ನಾಮಕರಣ ಮಾಡಲಾಗಿದೆ. ಮೆಡಿಕಲ್ ಕಾಲೇಜು ಆರಂಭಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ಎಲ್ಲ ಅಂದುಕೊಂಡಂತೆ ಆದರೆ 2023-24ರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶ ಹಾಗೂ ದಾಖಲಾತಿಗಳು ಆರಂಭವಾಗುತ್ತವೆ. ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಹುಟ್ಟೂರು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ಬಳಿ ಸತ್ಯಸಾಯಿ ಲೋಕಸೇವಾ ಸಂಸ್ಥೆ ಅಧೀನದಲ್ಲಿ ಪ್ರಾಥಮಿಕ ಪ್ರೌಢ ಹಾಗೂ ಉನ್ನತ ವಿದ್ಯಾಭ್ಯಾಸದ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪುಟ್ಟಪರ್ತಿಯ ಸತ್ಯ ಸಾಯಿ ಬಾಬಾರ ಅನುಯಾಯಿಗಳು, ಭಕ್ತರು ಸಂಸ್ಥೆಯನ್ನು ನಿರ್ವಹಿಸುತ್ತಿದ್ದು, ಶ್ರೀ ಮಧುಸೂದನ್ ಸಾಯಿ, ಸಾಯಿ ಬಾಬ ಪ್ರತಿನಿಧಿಯಾಗಿ ಸಂಸ್ಥೆಗಳನ್ನು ಮುನ್ನೇಡೆಸುತ್ತಿದ್ದಾರೆ. ಕೇಂದ್ರದ ಗೃಹ ಸಚಿವರಾದ ಅಮೀತ್ ಶಾ ರವರು ಕಳೆದ ಕೆಲವು ತಿಂಗಳ ಹಿಂದೆ ಆಶ್ರಮಕ್ಕೆ ಭೇಟಿ ನೀಡಿ 400 ಬೆಡ್ಗಳ ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡಿದ್ದು ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದೆ. ಮುದ್ದೇನಹಳ್ಳಿಯಲ್ಲಿ ಕಾಲೇಜು ಆರಂಭವಾಗುವುದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರದ 1 ಹಾಗೂ ಖಾಸಗಿ 1 ಒಟ್ಟು ಎರಡು ಮೆಡಿಕಲ್ ಕಾಲೇಜುಗಳು ಆರಂಭವಾದಂತೆ ಆಗುತ್ತದೆ. ಈಗಾಗಲೇ ಸಾರ್ವಜನಿಕರಿಗೆ 350 ಬೆಡ್ಗಳ ವಿನೂತನ ಆಸ್ಪತ್ರೆ ಕಾರ್ಯನಿರ್ವಹಣೆ ಮಾಡುತ್ತಿದೆ. ಪ್ರತಿದಿನ ಸಾವಿರಾರು ಜನ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡಿ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ.
