ಧಾರವಾಡ: ಇಂದು ಐಐಟಿ ಉದ್ಘಾಟನೆಗಾಗಿ ಧಾರವಾಡಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ರಾಜ್ಯ ಸರ್ಕಾರದ ವಿವೇಕ ಯೋಜನೆಯಡಿ ನಮ್ಮ ಜಿಲ್ಲೆಯಲ್ಲಿ 295 ಶಾಲಾ ಕೊಠಡಿಗಳನ್ನು ನಿರ್ಮಿಸಲು 42.15 ಕೋಟಿ ಬಿಡುಗಡೆ ಮಾಡಲಾಗಿದ್ದು, ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ 353.48 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 15 ಕಾಮಗಾರಿಗಳ ಲೋಕಾರ್ಪಣೆ ಹಾಗೂ 166 ಕೋಟಿ ವೆಚ್ಚದ ನೂತನ ಕ್ರೀಡಾ ಸಮುಚ್ಚಯದ ಭೂಮಿಪೂಜೆ ನೆರವೇರಿಸಲಿದ್ದಾರೆ. 150 ಕೋಟಿ ವೆಚ್ಚದ ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಯೋಜನೆಗೆ ಮೋದಿ ಚಾಲನೆ ನೀಡಲಿದ್ದಾರೆ.
ಜಯದೇವ ಹೃದ್ರೋಗ ಸಂಸ್ಥೆಯು ಇನ್ನು ಉತ್ತರ ಕರ್ನಾಟಕದ ಜನತೆಗೆ ಹುಬ್ಬಳ್ಳಿಯಲ್ಲಿ ಲಭ್ಯವಾಗಲಿದೆ. ರಾಜ್ಯ ಸರ್ಕಾರದಿಂದ 11 ಎಕರೆ ಪ್ರದೇಶದಲ್ಲಿ ಈ ಸಂಸ್ಥೆ ಸ್ಥಾಪನೆಗೆ 250 ಕೋಟಿ ರೂಪಾಯಿ ಬಿಡುಗಡೆ ಮಾಡಲಿದ್ದಾರೆ. ಜಲಜೀವನ ಮಿಷನ್ ಯೋಜನೆಯಡಿ ಸವದತ್ತಿಯ ರೇಣುಕಸಾಗರ ಜಲಾಶಯದಿಂದ 1042.34 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಎಲ್ಲ 144 ಗ್ರಾಮ ಪಂಚಾಯ್ತಿಗಳ 388 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲಜೀವನ ಮಿಷನ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಿಮ್ಸ್ ಆವರಣದಲ್ಲಿ 69.09 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವೈದ್ಯಕೀಯ ಸೌಲಭ್ಯಗಳ ಹಾಗೂ ವಿದ್ಯಾರ್ಥಿ ನಿಲಯಗಳನ್ನು ಉದ್ಘಾಟಿಸಲಿದ್ದಾರೆ. ಹುಬ್ಬಳ್ಳಿಯಲ್ಲಿ 20.1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಜಗತ್ತಿನ ಅತೀ ದೊಡ್ಡ ರೈಲ್ವೆ ಫ್ಲಾಟ್‌ಫಾರ್ಮ್‌ನ್ನು ಮೋದಿ ಉದ್ಘಾಟಿಸಲಿದ್ದಾರೆ.