ಐಐಟಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ರಾಜಕಾರಣಿಗಳ ಕಣ್ಣು ಮುಂದಿನ ಚುನಾವಣೆಗಳ ಮೇಲಿದ್ದರೆ, ಮುತ್ಸದ್ಧಿಯ ಕಣ್ಣು ಮುಂದಿನ ಪೀಳಿಗೆಯ ಭವಿಷ್ಯದ ಮೇಲಿರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂತಹ ಮುತ್ಸದ್ಧಿತನ ಹೊಂದಿರುವ ನೇತಾರ ತಾಂತ್ರಿಕವಾಗಿ ದೇಶವನ್ನು ಸಶಕ್ತಗೊಳಿಸಲು ಧಾರವಾಡ ಐಐಟಿ ಸ್ಥಾಪಿಸಿದ್ದಾರೆ ಎಂದರು. ಹೊಸಪೇಟೆ -ಹುಬ್ಬಳ್ಳಿ- ತಿನೈಘಾಟ್ ರೈಲ್ವೇ ಮಾರ್ಗದ ವಿದ್ಯುದ್ದೀಕರಣ ಸೇರಿದಂತೆ ಅನೇಕ ಸುಧಾರಣೆಗಳನ್ನು ತಂದಿದ್ದಾರೆ. ಪ್ರಸಕ್ತ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೇ ಸುಧಾರಣೆಗೆ 7651 ಕೋಟಿ ಮೀಸಲಿಟ್ಟಿರುವ ಡಬಲ್ ಇಂಜಿನ್ ಸರ್ಕಾರ ಇದಾಗಿದೆ. ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 13 ಲಕ್ಷ ಕೆಲಸಗಳಂತೆ ಕಳೆದ ಐದು ವರ್ಷಗಳಲ್ಲಿ ಸುಮಾರು 33 ಲಕ್ಷ ಉದ್ಯೋಗ ಸೃಜನೆ ಮಾಡಿರುವದರ ಹಿಂದೆ ಕೇಂದ್ರ ಸರ್ಕಾರದ ಶಕ್ತಿ ಇದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡಿದೆ. ಶಿಕ್ಷಣ, ಮೂಲಭೂತ ಸೌಕರ್ಯ, ಕೈಗಾರೀಕರಣದಂತಹ ಮಹತ್ವದ ಕಾರ್ಯಗಳು ರಾಜ್ಯ ಮತ್ತು ಕೇಂದ್ರದಲ್ಲಿ ಏಕಕಾಲದಲ್ಲಿ ನಡೆಯುತ್ತಿವೆ ಎಂದರು.
