ಹುಬ್ಬಳ್ಳಿ: ಒಂದೆಡೆ ಮಹಾನಗರ ಪಾಲಿಕೆಯ ವಿಳಂಬ ಧೋರಣೆ… ಮತ್ತೊಂದೆಡೆ ಜಿಲ್ಲಾಧಿಕಾರಿ ಸೂಚನೆ… ಆದೇಶ ಪಾಲನೆ ಸಂಕಟದಲ್ಲಿ ಸಬ್ ರಜಿಸ್ಟ್ರಾರ್ ಕಚೇರಿ… ಈ ಮೂವರ ಮಧ್ಯೆ ಸಿಕ್ಕು ಜನರು ಹೈರಾಣ ಆಗುತ್ತಿದ್ದಾರೆ… ಇ – ಆಸ್ತಿ ಅಥವಾ ಇ – ಸ್ವತ್ತು ಪ್ರಮಾಣ ಪತ್ರ ಕಡ್ಡಾಯ ಸಂಬಂಧ, ಅಧಿಕಾರಿಗಳು ರಾತ್ರೋರಾತ್ರಿ ಕೈಗೊಂಡ ದಿಢೀರ್ ನಿರ್ಧಾರದ ಪರಿಣಾಮ, ಜನರು ಇನ್ನಿಲ್ಲದ ಪಡಿ ಪಾಟಲು ಅನುಭವಿಸುವಂತಾಗಿದೆ …. ಇ – ಸ್ವತ್ತು ಪ್ರಮಾಣಪತ್ರ ಇದ್ದವರಿಗೆ ಮಾತ್ರ ಆಸ್ತಿ ನೋಂದಣಿ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಆದೇಶ ನೀಡಿದ ಮಾರನೇ ದಿನ ಸಬ್ ರಜಿಸ್ಟಾರ್ ಕಚೇರಿಯಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಹೀಗಾಗಿ ಆಸ್ತಿ ನೋಂದಣಿ ಹಾಗೂ ಇತರೆ ಕೆಲಸಗಳಿಗೆ ಬಂದಿದ್ದ ಜನರು, ಇ – ಆಸ್ತಿ ಪತ್ರ ಕೇಳಿದಾಕ್ಷಣ ಕಂಗಾಲಾಗಿದ್ದಾರೆ. ನೋಂದಣಿಗೆ ಬಂದಿದ್ದ ನೂರಾರು ಜನರು ಬರಿಗೈಲಿ ವಾಪಸ್ಸು ಆಗಿದ್ದಾರೆ. ದೂರದ ಊರಿನಿಂದ ಬಂದಿದ್ದ ಜನರೂ ಕಿರಿಕಿರಿ ಅನುಭವಿಸಬೇಕಾಯಿತು . ಬ್ಯಾಂಕ್ ಲೋನ್‌ಗಾಗಿ ಆಸ್ತಿ ಮೇಲೆ ಭೋಜಾ ಕೂಡಿಸಲು, ಭೋಜಾ ಹೆಸರು ಕಡಿಮೆ ಮಾಡಿಸಲು ಹೀಗೆ ಹಲವಾರು ರೀತಿಯ ನೋಂದಣಿ ಪ್ರಕ್ರಿಯೆಗಳು ಸಬ್ ರಜಿಸ್ಟರ್ ಕಚೇರಿಯಲ್ಲಿ ನಿತ್ಯವೂ ನಡೆಯುತ್ತಲೇ ಇರುತ್ತವೆ. ಭೋಜಾ ಕೂಡಿಸಲು, ಕಡಿಮೆ ಮಾಡಲು ಇ – ಆಸ್ತಿ ಅವಶ್ಯಕತೆ ಇಲ್ಲ ಎಂದು ಕೆಲವರು ಹೇಳುತ್ತಾರೆ. ಅದಕ್ಕೂ ಪ್ರಮಾಣಪತ್ರ ಕೇಳುತ್ತಿರುವುದು ಜನರಲ್ಲಿ ತಲೆನೋವಾಗಿ ಪರಿಣಮಿಸಿದೆ.
ಇನ್ನು ಜನರು ಇತ್ತ ತಿಂಗಳು ಹಿಂದೆಯೇ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಿದರೂ ಇ – ಆಸ್ತಿ ಪ್ರಮಾಣ ಪತ್ರ ದೊರೆಯುತ್ತಿಲ್ಲ ಎಂಬ ದೂರುಗಳು ದಿನೆ ದಿನೆ ಹೆಚ್ವುತ್ತಿವೆ. ಅದೆಷ್ಟೋ ಜನರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಲಯ ಕಚೇರಿಗಳಲ್ಲಿ ಇ – ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದುವರೆಗೂ ಪ್ರಮಾಣ ಪತ್ರ ಲಭಿಸಿಲ್ಲ. ಇಂಥ ನೂರಾರು ಜನರು ಅರ್ಜಿ ಸಲ್ಲಿಸಿ ತಿಂಗಳುಗಳಾಗಿವೆ. ಪ್ರಮಾಣ ಪತ್ರಕ್ಕೆ ಅಲೆದಾಡಿ ಸಾಕಾಗಿ ಕೈ ಚೆಲ್ಲಿ ಕುಳಿತಿದ್ದಾರೆ. ಇದಕ್ಕೆ ಮೂಲ ಕಾರಣವೇ ಸರ್ವರ್.
ಒಟ್ನಲ್ಲಿ ಹೇಳಬೇಕೆಂದ್ರೆ ಯಾವುದಾದರೂ ಒಂದು ಖಾಗದ ಪತ್ರ ಮಾಡಿಸಬೇಕಾದ್ರೆ ಜನರು ಪರದಾಡುವುದು ತಪ್ಪಿದ್ದಲ್ಲ. ಆದೇಶ ನೀಡುವುದುಕ್ಕಿಂತ ಮುಂಚೆ ಅದನ್ನು ಯಾವ ರೀತಿ ನಿರ್ವಹಿಸಬಹುದು ಎಂಬುದನ್ನು ಅರಿತು ಆದೇಶ ನೀಡಬೇಕಿತ್ತು. ಇ-ಸ್ವತ್ತ ಗಾಗಿ ಜನರ ಪರದಾಟಕ್ಕೆ ಅಧಿಕಾರಿಗಳು ಫುಲ್ ಸ್ಟಾಪ್ ಹಾಕಬೇಕಿದೆ…