ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಮಲ ಪಾಳೆಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಾಕಷ್ಟು ಕಸರತ್ತು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ-72ರಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಹುಬ್ಬಳ್ಳಿಯ ಮೂರುಸಾವಿರಮಠದ ಆವರಣದಿಂದ ಆಯೋಜಿಸಲಾಗಿರುವ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ, ಸಚಿವರುಗಳಾದ ಗೋವಿಂದ ಕಾರಜೋಳ, ಸಿ. ಸಿ ಪಾಟೀಲ್ ಹಾಗೂ ಜಿಲ್ಲೆಯ ನಾಯಕರಿಗೆ ಮಂಗಳಾರತಿ ಬೆಳಗುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಇನ್ನೂ ವಿಜಯ ಸಂಕಲ್ಪ ಯಾತ್ರೆಯು ಮೂರುಸಾವಿರಮಠದ ಆವರಣದಿಂದ ಪ್ರಾರಂಭಗೊಂಡು ಎಸ್.ಟಿ.ಭಂಡಾರಿ ಅಂಗಡಿ, ದಾಜಿಬಾನ್ ಪೇಟ ತುಳಜಾಭವಾನಿ ವೃತ್ತ, ಬೆಳಗಾವಿ ಗಲ್ಲಿ, ಜವಳಿ ಸಾಲ, ಸರಾಫ ಗಟ್ಟಿ, ಬಾರ್ದಾನ್ ಸಾಲ, ರಾಧಾಕೃಷ್ಣಗಲ್ಲಿಯ ಮುಖಾಂತರ ದುರ್ಗದ ಬೈಲ್ ವೃತ್ತದಲ್ಲಿ ಸಂಚರಿಸುವ ಮೂಲಕ ಸಂಚಲನ ಸೃಷ್ಟಿಸಿದೆ.
