ಹುಬ್ಬಳ್ಳಿ: ನಗರದ ಯಲ್ಲಾಪುರ ದೇಸಾಯಿ ಓಣಿಯಲ್ಲಿರುವ ದ್ಯಾಮವ್ವದೇವಿ ಮತ್ತು ಮರಿಯಮ್ಮ ದೇವಿ ಗ್ರಾಮದೇವತೆಯರ ಮರು ಪ್ರಾಣ ಪ್ರತಿಷ್ಠಾಪನೆಯನ್ನು ಅಲ್ಲಿನ ಗುರು ಹಿರಿಯರು ಮತ್ತು ಶ್ರೀ ಗ್ರಾಮದೇವತೆ ಉತ್ಸವ ಸಮಿತಿ ಅತಿ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ.
ಶ್ರೀ ದುರ್ಗವ್ವದೇವಿ, ದ್ಯಾಮವ್ವದೇವಿ, ಮರಿಯಮ್ಮದೇವಿಯವರ ಪುರ ಪ್ರವೇಶ ಪಲ್ಲಕ್ಕಿ ಉತ್ಸವದಲ್ಲಿ ದೇವತೆಯರನ್ನು ಅಲಂಕರಿಸಿ ಮೆರವಣಿಗೆ ಮಾಡಿದ್ದು, ಈ ಮೆರವಣಿಗೆಯಲ್ಲಿ ಜೋಡೆತ್ತು, ಚಂಡವಾದ್ಯ ಬಳಗ, ಡೊಳ್ಳು ಕುಣಿತ, ಕರಡಿ ಮಜಲು, ಸಾವಿರಾರು ಮಹಿಳೆಯರು ಯುವತಿಯರಿಂದ ಬೃಹತ್ ಕುಂಭ ಮೇಳ ಕೂಡ ಜರುಗಿತು. ಹೀಗೆ ಹಲವಾರು ಸಂಪ್ರದಾಯದ ಗ್ರಾಮದೇವತೆಯರ ಮೆರವಣಿಗೆ ಮಾಡಿದರು.
ಈ ಮೆರವಣಿಗೆ ಯಲ್ಲಾಪುರ ಓಣಿಯಿಂದ ಆರಂಭವಾಗಿ, ಬಂಕಾಪುರ ಚೌಕ್, ಅಕ್ಕಿ ಹೊಂಡ, ಹಿರೇಪೇಟ್, ಬೆಳಗಾವಿ ಗಲ್ಲಿ, ದುರ್ಗದ ಬೈಲ್, ಆರ್. ಕೆ ಗಲ್ಲಿ, ಪಗಡಿ ಓಣಿ, ವೀರಾಪೂರ ಓಣಿ ಮೂಲಕ ಬಂದು ಯಲ್ಲಾಪುರ ಓಣಿಗೆ ಬಂದು ಮುಕ್ತಾಯವಾಗುತ್ತದೆ. ಇಂದು ಸಂಜೆ ನಡೆಯುವ ಆಶೀರ್ವಚನಕ್ಕೆ ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಜಗದ್ಗುರು ಗುರುಸಿದ್ಧರಾಜಯೋಗೇಂದ್ರ ಮಹಾಸ್ವಾಮಿಗಳು, ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
