ಧಾರವಾಡ: ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು, ಉತ್ತಮ ಗುಣಮಟ್ಟದ ರಸ್ತೆ, ಚರಂಡಿ, ಶಾಲೆ ಹಾಗೂ ಸಮುದಾಯದ ಭವನ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಧಾರವಾಡ ಶಾಸಕರಾದ ಅಮೃತ ದೇಸಾಯಿಯವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ 3.75 ಕೋಟಿ ಅನುದಾನದಡಿ ಇಲ್ಲಿನ ವಾರ್ಡ್ ನಂಬರ್ 1ರಲ್ಲಿ ಬರುವ ಸಾಧನಕೆರೆಯ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಶಾಸಕನಾಗಿ ಆಯ್ಕೆಯಾಗುವ ಮುನ್ನ ನಾನು ಕ್ಷೇತ್ರದ ಜನತೆಗೆ ನೀಡಿದ ಬಹುತೇಕ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇನೆ ಎಂಬ ಸಂತೃಪ್ತಿ ನನಗಿದೆ. ಕ್ಷೇತ್ರದಲ್ಲಿ ಹಿಂದೆ ನಡೆಯುತ್ತಿದ್ದ ಗುಂಡಾಗಿರಿ ಹಾಗೂ ಭಯ ಹುಟ್ಟಿಸುವ ಕೃತ್ಯಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಿದ್ದೇನೆ ಎಂದರು. ಗ್ರಾಮೀಣ ಪ್ರದೇಶದ ಜನರು ಉತ್ತಮ ರಸ್ತೆ ಇಲ್ಲದೇ, ಅನುಭವಿಸುತ್ತಿದ್ದ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.
ಗ್ರಾಮಸ್ಥರ ಸಹಕಾರದಿಂದಾಗಿ ಕ್ಷೇತ್ರದಲ್ಲಿ ಬರುವ ಕೆರೆಗಳನ್ನು ಸಂಪೂರ್ಣ ಅಭಿವೃದ್ಧಿ ಪಡಿಸುವ ಕೆಲಸ ಮಾಡಲಾಗಿದೆ. ಅದರಂತೆ ಸಾಧನಕೆರೆಯ ಸಮಗ್ರ ಅಭಿವೃದ್ಧಿ ಮಾಡಿಸಲಾಗುವುದು ಎಂದರು.
ಪಾಲಿಕೆ ಸದಸ್ಯರಾದ ಮಂಜುನಾಥ ಬಟ್ಟೆನ್ನವರ, ಅನಿತಾ ನಾರಾಯಣ ಚಳಗೇರಿ, ನಿತಿನ್ ಇಂಡಿ ಹಾಗೂ ಯುವ ಮುಖಂಡರಾದ ಸಂತೋಷ ದೇವರಡ್ಡಿ, ಈರಣ್ಣಾ ಅಗಳಗಟ್ಟಿ, ಆನಂದ ಉದ್ದನ್ನವರ, ಹರೀಶ ಬಿಜಾಪುರ ಸೇರಿದಂತೆ ಅನೇಕರು ಇದ್ದರು.
