ಹುಬ್ಬಳ್ಳಿ: ಬಿಜೆಪಿ ಪಕ್ಷದಲ್ಲಿ ಸ್ಪಷ್ಟವಾದ ನಿಲುವು ಇದ್ದು, ಸಿಎಂ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿಕೆ ವಿಚಾರವಾಗಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆ.ಪಿ. ನಡ್ಡಾ ಅವರು ನನ್ನ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟು ಒಳ್ಳೆಯ ಮಾತು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಾಗ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಹೋಗುವುದಾಗಿ ಹೇಳಿದ್ದೆ ಎಂದ ಅವರು ಕೇಂದ್ರ ಸಂಸದೀಯ ಮಂಡಳಿ ಮತ್ತು ಶಾಸಕರು ಸಿಎಂ ಆಯ್ಕೆ ಮಾಡುತ್ತಾರೆ. ಹೀಗಾಗಿ ನಡ್ಡಾ ಅವರು ಹೇಳಿದ ಮಾತಿಗೆ ನಾನು ಚಿರ ಋಣಿಯಾಗಿರುತ್ತೇನೆ. ಈ ಮೂಲಕ ಎಲ್ಲರನ್ನು ಒಟ್ಟಾಗಿ ತಗೆದುಕೊಂಡು ಹೋಗುತ್ತೇನೆಂದರು.
ಪ್ರವಾಹದ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿಯವರು ರಾಜ್ಯಕ್ಕೆ ಬಂದಿಲ್ಲ ಎಂಬ ಹೇಳಿಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರವಾಹ ಬಂದಂತಹ ಸಂದರ್ಭದಲ್ಲಿ ಹೆಚ್ಚಿನ ಅನುದಾನ ನೀಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ. ಈ ಹಿಂದೆ ಪ್ರಿಯಾಂಕ ಗಾಂಧಿಯವರ ಸರ್ಕಾರವಿದ್ದಾಗ ಮನೆ ಬಿದ್ದರೆ ಎರಡು ಸಾವಿರ ಕೊಡುತ್ತಿದ್ದರು ಎಂದ ಅವರು ಅತಿವೃಷ್ಟಿ ಪರಿಹಾರ ಮೋದಿ ಕಾಲದಲ್ಲಿ ಹೆಚ್ಚಿಸಲಾಗಿದೆ. ಅತೀ ಹೆಚ್ಚು ರೈತರ ಆತ್ಮಹತ್ಯೆ ಆಗಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ. ಅಂದು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪ್ರಿಯಾಂಕ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಬಂದೋದ್ರಾ ಎಂದು ಪ್ರಶ್ನಿಸಿದ ಅವರು, ಯಾವುದು ಸೂಕ್ತವಲ್ಲವೋ ಅದನ್ನು ಮಾತನಾಡಿ, ಜನರನ್ನು ಮರಳು ಮಾಡಲು ಸಾಧ್ಯವಿಲ್ಲ. ಜನತೆ ಗೊತ್ತಿರುವ ವಿಚಾರವಿದು ಪ್ರಿಯಾಂಕ ಗಾಂಧಿ ಕಾಂಗ್ರೆಸ್ ನ ಸರಿಯಾದ ಮಾಹಿತಿ ನೀಡಿಲ್ಲ ಎಂದು ಪ್ರಿಯಾಂಕ ಗಾಂಧಿ ಹೇಳಿಕೆಗೆ ಸಿಎಂ ತಿರುಗೇಟು ನೀಡಿದರು.
ರೇಡ್ ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ, ಕಳ್ಳನ ಜೀವ ಹುಳ್ಳುಳ್ಳಗೆ ಎಂದು ಅವರು ವ್ಯಂಗ್ಯವಾಡಿದರು.