Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಗುಜರಿ ಪಾಲಾಗುವ ಭೀತಿಯಲ್ಲಿ ಭಗವತಿ ಪ್ರೇಮ್ ಡ್ರಜ್ಜರ್ ಹಡಗು.

ಗುಜರಿ ಪಾಲಾಗುವ ಭೀತಿಯಲ್ಲಿ ಭಗವತಿ ಪ್ರೇಮ್ ಡ್ರಜ್ಜರ್ ಹಡಗು.

ಮಂಗಳೂರು:ನವಮಂಗಳೂರು ಬಂದರಿನಲ್ಲಿ ಹೂಳು ತೆಗೆಯಲು ಮುಂಬೈಯಿಂದ ಬಂದಿದ್ದ ಡ್ರೆಜ್ಜರ್ ಹಡಗು ‘ಭಗವತಿ ಪ್ರೇಮ್’ ಗುಜರಿ ಪಾಲಾಗುವ ಸಂಶಯವಿದೆ.
ಮುಂಬೈಯ ಮರ್ಕೆಟರ್ ಸಂಸ್ಥೆಯ ಹಡಗು ಇದಾಗಿದ್ದು, ಕ್ಯಾರ್ ಚಂಡಮಾರುತದಿಂದಾಗಿ ಕಡಲು ಪ್ರಕ್ಷುಬ್ಧಗೊಂಡಾಗ ಅಪಾಯಕ್ಕೆ ಸಿಲುಕಿತ್ತು. ಅದನ್ನು ಸುರತ್ಕಲ್ ಗುಡ್ಡೆಕೊಪ್ಲ ಬಳಿ ಸಮುದ್ರ ಕಿನಾರೆಯಿಂದ 300ರಿಂದ 500 ಮೀಟರ್ ದೂರಕ್ಕೆ ಸೋಮವಾರ ರಾತ್ರಿ ತಂದು ನಿಲ್ಲಿಸಲಾಗಿದೆ.

ವಸ್ತುಗಳ ಸಾಗಾಟ: ಅಪಾಯಕ್ಕೆ ಸಿಲುಕಿರುವ ಬಾರ್ಜ್‌ನಲ್ಲಿದ್ದವರನ್ನು ಸೋಮವಾರ ರಾತ್ರಿ 9 ಗಂಟೆ ವೇಳೆಗೆ ಟಗ್ ಮೂಲಕ ಸ್ಥಳಾಂತರಿಸಲಾಗಿದ್ದು, ಇದಕ್ಕೆ ಮೊದಲು ಬಾರ್ಜ್‌ನಲ್ಲಿ ಉರಿಯುತ್ತಿದ್ದ ದೀಪಗಳನ್ನು ನಂದಿಸಲಾಗಿದೆ. ಅದರಲ್ಲಿದ್ದ ವಸ್ತುಗಳನ್ನು ಮಂಗಳವಾರ ಇನ್ನೊಂದು ಬಾರ್ಜ್‌ನಲ್ಲಿ ಕೊಂಡೊಯ್ಯಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಡ್ರೆಜ್ಜರ್ ಮರಳಿನಲ್ಲಿ ಸಾಕಷ್ಟು ಹೂತು ಹೋಗಿರುವ ಸಾಧ್ಯತೆಯಿದೆ. ಇದನ್ನು ಪುನಃ ದುರಸ್ತಿಗೊಳಿಸಿ ಸಮುದ್ರಕ್ಕೆ ಮರಳಿ ಎಳೆಯುವುದು ವೆಚ್ಚದಾಯಕ ಅಥವಾ ಕಷ್ಟಕರ. ಹಾಗಾಗಿ ಇದನ್ನು ಈ ಭಾಗದಲ್ಲಿಯೇ ಸ್ಕ್ರಾಪ್ ಮಾಡುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಹೇಳುವ ಸ್ಥಳೀಯ ಮೀನುಗಾರರು, ಇದಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಇದೇ ಕಂಪನಿಯ ಇನ್ನೊಂದು ಡ್ರೆಜ್ಜರ್ ಮುಳುಗಿದ್ದನ್ನು ಮೇಲೆತ್ತುವ ಬೇಡಿಕೆ ಈಡೇರದೇ ಇರುವುದನ್ನೂ ಮೀನುಗಾರರು ನೆನಪಿಸುತ್ತಾರೆ.

ಸ್ಥಳಾಂತರಕ್ಕೆ ಆಗ್ರಹ: ಈ ಪ್ರದೇಶ ಮೀನುಗಳು ಯಥೇಚ್ಛ ಸಿಗುವ ಸ್ಥಳವಾಗಿದ್ದು, ಇಲ್ಲಿ ಡ್ರೆಜ್ಜರ್ ನಿಲುಗಡೆ ಇಲ್ಲವೇ ಸ್ಕ್ರಾಪ್‌ಗೊಳಿಸುವುದಕ್ಕೆ ಮೀನುಗಾರರ ವಿರೋಧವಿದೆ. ಡ್ರೆಜ್ಜರನ್ನು ಇಲ್ಲಿಂದ ಕೂಡಲೇ ಸ್ಥಳಾಂತರಿಸಬೇಕು. ಈ ಬಗ್ಗೆ ಬುಧವಾರ ನಡೆಯಲಿರುವ ಗುಡ್ಡೆಕೊಪ್ಲ ಮೊಗವೀರ ಸಭಾದ ಮಹಾಸಭೆಯಲ್ಲಿ ಚರ್ಚಿಸಲಾಗುವುದು ಎಂದು ಗುಡ್ಡೆಕೊಪ್ಲ ಮೊಗವೀರ ಮಹಾಸಭಾ ಅಧ್ಯಕ್ಷ ಕೇಶವ ಕುಂದರ್ ತಿಳಿಸಿದ್ದಾರೆ.
ಈ ಜನವಸತಿ ಸ್ಥಳದಲ್ಲಿ ಹಡಗನ್ನು ಒಡೆದಲ್ಲಿ ಸಮುದ್ರಮಾಲಿನ್ಯ, ಅಲ್ಲದೆ ಮೀನುಗಾರಿಕೆಗೆ ಧಕ್ಕೆಯಾಗಲಿರುವುದದಿಂದ ಈ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗುವುದು ಎಂದು ದೊಡ್ಡಕೊಪ್ಲ ಮೊಗವೀರ ಸಭಾ ಅಧ್ಯಕ್ಷ ಗಿರಿಧರ್ ಕೋಟ್ಯಾನ್ ತಿಳಿಸಿದ್ದಾರೆ.

ಸ್ಥಳಾಂತರಿಸಲು ಸೂಚಿಸಿದ್ದರೂ ಕ್ರಮ ಕೈಗೊಳ್ಳದ ಡ್ರೆಜ್ಜರ್ ಕಂಪನಿ: ಭಗವತಿ ಪ್ರೇಮ್ ಡ್ರೆಜ್ಜರನ್ನು ಎನ್‌ಎಂಪಿಟಿ ಬಳಿ ಏಪ್ರಿಲ್‌ನಿಂದ ನಿಲ್ಲಿಸಲಾಗಿದ್ದು, ಅದರ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಅದನ್ನು ಬಂದರು ಪ್ರದೇಶದಿಂದ ಸ್ಥಳಾಂತರಿಸುವಂತೆ ಹಾಗೂ ಸುಸ್ಥಿತಿಯಲ್ಲಿಡುವಂತೆ ಅದರ ಮಾಲೀಕರಾದ ಮರ್ಕೆಟರ್‌ಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅ.28ರಂದು ಡ್ರೆಜ್ಜರ್‌ನಲ್ಲಿ ಸೋರಿಕೆ ಬಗ್ಗೆ ಕ್ಯಾಪ್ಟನ್ ಮಾಹಿತಿ ನೀಡಿದ್ದು, ನಾವು ಅಧಿಕಾರಿಗಳ ಜತೆಗೆ ಹೋಗಿ ಪರಿಶೀಲಿಸಿದಾಗ ಅದು ಇನ್ನು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿಲ್ಲ ಎಂದು ಕಂಡುಕೊಳ್ಳಲಾಗಿದೆ. ಸಮುದ್ರ, ಪರಿಸರ, ಎನ್‌ಎಂಪಿಟಿ, ಪರಿಸರದ ಪ್ರದೇಶಕ್ಕೆ ಹಾನಿಯಾಗದಂತೆ ಇದನ್ನು ಲೈಟ್‌ಹೌಸ್ ಬಳಿ ಸುರಕ್ಷಿತವಾಗಿ ತಂದು ನಿಲ್ಲಿಸಿದ್ದೇವೆ ಎಂದು ಎನ್‌ಎಂಪಿಟಿ ಅಧ್ಯಕ್ಷ ಎ.ವಿ ರಮಣ ತಿಳಿಸಿದ್ದಾರೆ.

ಡ್ರೆಜ್ಜರ್ ವೀಕ್ಷಣೆಗೆ ಜನಸಾಗರ
ವಿವಾದಗಳು ಏನೇ ಇದ್ದರೂ, ಈ ಡ್ರೆಜ್ಜರ್ ಸಮೀಪದಿಂದ ವೀಕ್ಷಣೆಗೆ ಆಸಕ್ತರು ಭಾರಿ ಸಂಖ್ಯೆಯಲ್ಲಿ ಸೋಮವಾರ ರಾತ್ರಿಯಿಂದಲೇ ಧಾವಿಸುತ್ತಿದ್ದಾರೆ. ಡ್ರೆಜ್ಜರ್ ನಿಲ್ಲಿಸಿದ ಕಿನಾರೆಯಲ್ಲಿ ರಾತ್ರಿಯಿಂದ ಪೊಲೀಸ್ ಕಾವಲು ಹಾಕಲಾಗಿದೆ. ಡ್ರೆಜ್ಜರ್ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡಾತ ಸೋಮವಾರ ರಾತ್ರಿ ಸ್ಥಳದಲ್ಲಿದ್ದು, ನಂತರ ನಾಪತ್ತೆಯಾಗಿದ್ದಾನೆ ಎಂದು ಎಂದಿದ್ದಾರೆ ಮೀನುಗಾರ ಮುಖಂಡ ಶ್ರೀಕಾಂತ್ ಸಾಲ್ಯಾನ್ ಗುಡ್ಡೆಕೊಪ್ಲ

ಇದು 2ನೇ ಡ್ರೆಜ್ಜರ್: ಎನ್‌ಎಂಪಿಟಿ ಹೊರವಲಯದ ಬಳಿ ಚಾನಲ್‌ಗಿಂತ ಹೊರಭಾಗದಲ್ಲಿ ಇದ್ದ ಇದೇ ಕಂಪನಿಯ ತ್ರಿದೇವಿ ಪ್ರೇಮ್ ಡ್ರೆಜ್ಜರ್ ಸೆ.3ರಂದು ಎನ್‌ಎಂಪಿಟಿ ಬಳಿ ಮುಳುಗಿತ್ತು. ಈಗ ಭಗವತಿ ಪ್ರೇಮ್ ಡ್ರೆಜ್ಜರ್ ಕೂಡ ಅದೇ ಸಾಲಿನಲ್ಲಿದೆ. ಇದರೊಂದಿಗೆ ಒಂದೇ ಕಂಪನಿಗೆ ಸೇರಿದ ಒಟ್ಟು ಎರಡು ಡ್ರೆಜ್ಜರ್‌ಗಳು ಎನ್‌ಎಂಪಿಟಿ ಬಳಿ ಜೀವಿತಾವಧಿ ಕೊನೆಗೊಳ್ಳುವ ಹಂತಕ್ಕೆ ಬಂದಂತಾಗಿದೆ. 2007ರಲ್ಲಿ ನಿರ್ಮಾಣಗೊಂಡಿದ್ದ ಈ ಹಡಗು 114 ಮೀ ಉದ್ದ, 21 ಮೀಟರ್ ಅಗಲವಿದೆ. ಸುಮಾರು 7256 ಟನ್ ತೂಕ ಹೊಂದಿದೆ. ತ್ರಿದೇವಿ ಪ್ರೇಮ್ 102 ಮೀ. ಉದ್ದ, 19 ಮೀ. ಅಗಲವಿತ್ತು. ಎನ್‌ಎಂಪಿಟಿಯಲ್ಲಿ ಹೂಳೆತ್ತುವ ಗುತ್ತಿಗೆ ಪಡೆದುಕೊಂಡಿದ್ದ ಕಂಪನಿ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸಿಲ್ಲ ಎಂಬ ಕಾರಣಕ್ಕೆ ಗುತ್ತಿಗೆಯನ್ನು ರದ್ದುಗೊಳಿಸಲಾಗಿತ್ತು. ನಂತರ ಡ್ರೆಜ್ಜರ್‌ಗಳು ಬಂದರಿನ ಹೊರವಲಯದಲ್ಲಿ ಲಂಗರು ಹಾಕಿದ್ದವು.

Share

About SRINIVAS BIG TV NEWS, MANGALORE

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!