Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಬೆಳಗಾವಿ / ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸಚಿವ ಸೋಮಣ್ಣ ಭೂಮಿಪೂಜೆ.

ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸಚಿವ ಸೋಮಣ್ಣ ಭೂಮಿಪೂಜೆ.

 

ಬೆಳಗಾವಿ: ಪ್ರವಾಹದಿಂದ ಮನೆ ಕಳೆದುಕೊಂಡಿರುವ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದಲ್ಲಿ ಸಂತ್ರಸ್ತ ಕುಟುಂಬದ ಮನೆ ನಿರ್ಮಾಣಕ್ಕೆ ವಸತಿ ಸಚಿವ ವಿ.ಸೋಮಣ್ಣ ಅವರು ಭೂಮಿಪೂಜೆ ನೆರವೇರಿಸಿದರು.
ಜಿಲ್ಲೆಯ ಪ್ರವಾಹ ಬಾಧಿತ ಪ್ರದೇಶಗಳಿಗೆ ಇಂದು ಭೇಟಿ ನೀಡಿದ ಅವರು, ಈಗಾಗಲೇ ಮನೆ ನಿರ್ಮಾಣಕ್ಕೆ ಮೊದಲ ಕಂತಿನ ಒಂದು ಲಕ್ಷ ರೂಪಾಯಿ ಪಡೆದುಕೊಂಡಿರುವ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಮಾಂಜರಿ ಗ್ರಾಮದಲ್ಲಿ ಚಾಲನೆ ನೀಡಿದರು.
ರಾಜಮಾ ಸಾತಪ್ಪ ಕುರಣಿ ಅವರ ಮನೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಯಿತು.
ಒಂದು ಲಕ್ಷ ರೂಪಾಯಿ ಜಮೆ ಆಗಿದ್ದು, ನಿರ್ಮಾಣ ಕೆಲಸ ಆರಂಭಿಸಲಾಗುವುದು ಎಂದು ರಾಜಮಾ ತಿಳಿಸಿದರು.
ಕುಸಿದಿರುವ ಮನೆಗಳ ಪರಿಶೀಲನೆಗೆ ಆಗಮಿಸಿದ ಸಚಿವ ಸೋಮಣ್ಣ ಅವರಿಗೆ ಸಂತ್ರಸ್ತರ ಕುಟುಂಬದ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.
ಭೂಮಿಪೂಜೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಸೋಮಣ್ಣ ಅವರು, ಪದೆ ಪದೇ ಮುಳುಗಡೆಯಾಗುವ ಗ್ರಾಮಗಳ ಜನರು ಒಪ್ಪಿದರೆ ಶಾಶ್ವತ ಸ್ಥಳಾಂತರಕ್ಕೆ ಸರ್ಕಾರ ಸಿದ್ಧವಿದೆ. ಎಷ್ಟೇ ಹಣ ಖರ್ಚಾದರೂ ಸರ್ಕಾರ ನೀಡಲಿದೆ ಎಂದರು.
ಸಂಪೂರ್ಣ ಮುಳುಗಡೆಯಾಗಿದ್ದ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ೨೨೫ ಮನೆಗಳಿಗೆ ತಲಾ ಲಕ್ಷ ರೂಪಾಯಿ ಜಮೆ ಆಗಿದೆ. ಅದೇ ರೀತಿ ೨೦೦ ಕ್ಕೂ ಅಧಿಕ ಮನೆಗಳನ್ನು ಎ ಕೆಟಗರಿಯಲ್ಲಿ ಪರಿಗಣಿಸಿ ಪರಿಹಾರ ಬಿಡುಗಡೆ ಮಾಡಲಿ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದರು.
೩೨೯ ಮನೆಗಳಿಗೆ ತಲಾ ೫೦ ಸಾವಿರ ಬಿಡುಗಡೆ ಮಾಡಲಾಗಿದೆ. ಶಾಶ್ವತ ಸ್ಥಳಾಂತರಕ್ಕೆ ಗ್ರಾಮಸ್ಥರು ಒಪ್ಪಿದರೆ ಸರ್ಕಾರವು ಸಿದ್ಧವಿದೆ. ಮಾಂಜರಿ ದೊಡ್ಡ ಗ್ರಾಮವಾಗಿದ್ದು, ಅಂಬೇಡ್ಕರ್ ಕಾಲನಿ ಪದೆ ಪದೇ ಮುಳುಗಡೆ ಆಗುವುದರಿಂದ ಸ್ಥಳೀಯ ಜನರ ಅಭಿಪ್ರಾಯ ಹಾಗೂ ಜನಪ್ರತಿನಿಧಿಗಳ ಜತೆ ಚರ್ಚಿಸಿ ಶಾಶ್ವತ ಸ್ಥಳಾಂತರಕ್ಕೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಸೋಮಣ್ಣ ಹೇಳಿದರು.

ಅತೀ ಹೆಚ್ಚು ಪರಿಹಾರ:
ಪ್ರವಾಹ ಸಂತ್ರಸ್ತರಿಗೆ ಇತಿಹಾಸದಲ್ಲಿ ಇದೇ ಮೊದಲ ಬಾರಿ ಅತೀ ಹೆಚ್ಚು ಪರಿಹಾರ ಜಮೆ ಮಾಡಲಾಗಿದೆ.
ಬೆಳೆಪರಿಹಾರ ಹೆಚ್ಚಿಸಲಾಗಿದೆ. ನೇಕಾರ ಕುಟುಂಬಗಳಿಗೂ ಮುಖ್ಯಮಂತ್ರಿಗಳ ಆಶಯದಂತೆ ಹೆಚ್ಚುವರಿ ಪರಿಹಾರವನ್ನು ಸರ್ಕಾರ ನೀಡುತ್ತಿದೆ ಎಂದು ಸಚಿವ ಸೋಮಣ್ಣ ವಿವರಿಸಿದರು.
ಎ ಮತ್ತು ಕೆಟಗರಿ ಮನೆಗಳಿಗೆ ಈಗಾಗಲೇ ಬಹುತೇಕ ಮನೆಗಳ ನಿರ್ಮಾಣಕ್ಕೆ ತಲಾ ಒಂದು ಲಕ್ಷ ರೂಪಾಯಿ ಜಮೆ ಮಾಡಲಾಗಿದೆ. ಆದಾಗ್ಯೂ ಯಾವುದಾದರೂ ತಾಂತ್ರಿಕ ಕಾರಣಕ್ಕೆ ಪರಿಹಾರದ ಹಣ ಜಮೆಯಾಗಿರದಿದ್ದರೆ ಕೂಡಲೇ ಅಂತಹ ಮನೆಗಳಿಗೂ ಪರಿಹಾರ ನೀಡಬೇಕು ಎಂದು ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು.
ಮನೆ ಕಳೆದುಕೊಂಡ ಪ್ರತಿ ಕುಟುಂಬಕ್ಕೂ ಪರಿಹಾರ ಒದಗಿಸುವಂತೆ ತಿಳಿಸಿದರು.
ಇದಕ್ಕೂ ಮುಂಚೆ ಸಚಿವ ವಿ.ಸೋಮಣ್ಣ ಅವರು ಮಾಂಜರಿಯಲ್ಲಿರುವ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ವಿಧಾನ ಪರಿಷತ್ತಿನಲ್ಲಿ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ್ ಕವಟಗಿಮಠ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು.

ಖಾತೆಗೆ ಹಣ ಜಮೆ; ಕಾಮಗಾರಿ ಆರಂಭ:
ಮಾಂಜರಿಯ ಅಂಬೇಡ್ಕರ್ ಭವನದಲ್ಲಿ ಆರು ಕುಟುಂಬಗಳಿಗೆ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ.
ಮನೆಗಳು ಸಂಪೂರ್ಣ ಕುಸಿದಿದ್ದು, ಮನೆ ನಿರ್ಮಾಣ ಕಾರ್ಯ ಆರಂಭಿಸಲಾಗಿದ್ದು, ತಾತ್ಕಾಲಿಕವಾಗಿ ಇಲ್ಲಿ ವಸತಿ ಕಲ್ಪಿಸಲಾಗಿದೆ. ನಮ್ಮ ಖಾತೆಗೆ ಮೊದಲ ಕಂತು ಒಂದು ಲಕ್ಷ ರೂಪಾಯಿ ಜಮೆ ಆಗಿರುತ್ತದೆ ಎಂದು ಅನ್ನಪೂರ್ಣ ಮಾಯಣ್ಣವರ ತಿಳಿಸಿದರು.
ಆರೂ ಕುಟುಂಬಗಳಿಗೆ ತಲಾ ಆರು ಲಕ್ಷ ರೂಪಾಯಿ ಜಮೆ ಆಗಿದ್ದು, ಮನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದೇವೆ ಎಂದು ಹೇಳಿದರು.
ಇದಾದ ಬಳಿಕ ಯಡೂರ ಮತ್ತು ಕಾಗವಾಡ ತಾಲ್ಲೂಕಿನ ಜುಗೂಳ ಗ್ರಾಮದಲ್ಲಿ ಪರಿಶೀಲನೆ ಕೈಗೊಂಡರು.
ಜುಗೂಳ ಗ್ರಾಮದ ಸಿದ್ದಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಪ್ರವಾಹ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ ಅವರು, ಪ್ರವಾಹಬಾಧಿತ ಪ್ರತಿ ಕುಟುಂಬಕ್ಕೂ ಪರಿಹಾರ ತಲುಪಿಸಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಗಳಿಗೆ ಈಗಾಗಲೇ ಮೊದಲ ಕಂತಿನಲ್ಲಿ ಒಂದು ಲಕ್ಷ ನೀಡಲಾಗಿದ್ದು, ಸಂತ್ರಸ್ತರು ಮನೆ ನಿರ್ಮಾಣ ಕೆಲಸ ಆರಂಭಿಸಬೇಕು ಎಂದು ತಿಳಿಸಿದರು.

Share

About Site Default

Check Also

ಮಹಾರಾಷ್ಟ್ರದಲ್ಲಿ ತಗ್ಗಿದ ವರುಣನ ಆರ್ಭಟ.‌

ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಧೋ ಎಂದು ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ಪ್ರಮಾಣ ಇಂದು ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯಕ್ಕೆ ಹರಿದು …

Leave a Reply

Your email address will not be published. Required fields are marked *

error: Content is protected !!