Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಶಿಕ್ಷಕರಿಗೆ ಕೋವಿಡ್‌ ಪ್ಯಾಕೇಜ್‌ ನೀಡಲು ವಿಪ ಸಭಾಪತಿ ಬಸವರಾಜ ಹೊರಟ್ಟಿ ಬಿಎಸ್ ವೈ ಗೆ ಆಗ್ರಹ

ಶಿಕ್ಷಕರಿಗೆ ಕೋವಿಡ್‌ ಪ್ಯಾಕೇಜ್‌ ನೀಡಲು ವಿಪ ಸಭಾಪತಿ ಬಸವರಾಜ ಹೊರಟ್ಟಿ ಬಿಎಸ್ ವೈ ಗೆ ಆಗ್ರಹ

ಹುಬ್ಬಳ್ಳಿ: ಕೋವಿಡ್‌ನಿಂದಾಗಿ ಖಾಸಗಿ ಅನುದಾನ ರಹಿತ ಶಾಲಾ, ಕಾಲೇಜುಗಳ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದು ರಾಜ್ಯ ಸರ್ಕಾರ ಅವರಿಗೆ ಆರ್ಥಿಕ ನೆರವು ನೀಡಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಇಂದು ಪತ್ರಬರೆದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಪವಿತ್ರ ವೃತ್ತಿ ಎಂದು ಪರಿಗಣಿಸಲ್ಪಡುವ ಮತ್ತು ದೇಶ ನಿರ್ಮಾಣ ಕಾರ್ಯದಲ್ಲಿ ತಮ್ಮದೇ ಕೊಡುಗೆ ನೀಡಿರುವ ಶಿಕ್ಷಣ ಸಮುದಾಯಕ್ಕೆ ನೆರವಾಗಬೇಕು. ಸಣ್ಣ ವ್ಯಾಪಾರಸ್ಥರು, ಆಟೊ, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರಿಗೆ ನೀಡಿದಂತೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಕೋರಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಮಕ್ಕಳಿಗೆ ವಿದ್ಯೆ ಧಾರೆ ಎರೆಯುತ್ತಿರುವ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಕುರಿತು ಹಿಂದೆ ಹಲವು ಸಂದರ್ಭಗಳಲ್ಲಿ ಮೌಖಿಕವಾಗಿ ಹಾಗೂ ಕೆಲವು ಸಲ ಪತ್ರದ ಮೂಲಕ ತಮಗೆ ತಿಳಿಸುವ ಪ್ರಯತ್ನ ಮಾಡಿದ್ದೇನೆ. ಆದರೂ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ಕಳೆದ ವರ್ಷದ ಮಾರ್ಚ್‌ನಲ್ಲಿ ಕೋವಿಡ್‌ ಕಾರಣದಿಂದ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಆಗಿನಿಂದ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ವೇತನವಿಲ್ಲದೆ ಅಭದ್ರತೆಯಲ್ಲಿ ನರಳುತ್ತಿದ್ದಾರೆ. ಹಲವಾರು ಜನ ಕೆಲಸ ಕಳೆದುಕೊಂಡಿದ್ದಾರೆ. ಈಗ ಲಾಕ್‍ಡೌನ್‍ನಿಂದ ಶಾಲೆಗಳು ಮುಚ್ಚಿದ್ದು ಆ ಶಿಕ್ಷಕರು ಉದ್ಯೋಗವಿಲ್ಲದೇ ಹಾಗೂ ಜೀವನ ನಿರ್ವಹಣೆಗೆ ಸಂಬಳವಿಲ್ಲದೇ ದಿನನಿತ್ಯ ಉಪಜೀವನಕ್ಕೆ ಪರದಾಡುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ

ವೇತನವಿಲ್ಲದ ಕಾರಣಕ್ಕಾಗಿ ಹಲವು ಶಿಕ್ಷಕರು ಹೊಟ್ಟೆ ಹೊರೆಯಲು ತರಕಾರಿ, ಕಾಳು, ಹಣ್ಣುಹಂಪಲು ಮಾರಾಟ ಮಾಡುವ ಅನಿವಾರ್ಯತೆಯಲ್ಲಿದ್ದರೆ, ಇನ್ನೂ ಕೆಲವರು ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮಗಳಲ್ಲಿ ಕೂಲಿ ಆಳುಗಳಾಗಿ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ಕುಟುಂಬಗಳು ಬೀದಿಪಾಲಾಗುವ ಹಂತಕ್ಕೆ ಬಂದಿದೆ. ಎಷ್ಟೋ ಜನ ಶಿಕ್ಷಕ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗುವ ಹಂತ ತಲುಪುತ್ತಾರೆ ಎಂಬ ಭಯ ನನ್ನನ್ನು ಆವರಿಸಿದೆ. ಆದ್ದರಿಂದ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೊರೊನಾ ಭೀತಿಯಿಂದ ಮಕ್ಕಳು ಶಾಲೆಗೆ ಬರದಿದ್ದರೆ ಪಾಲಕರು ಶುಲ್ಕ ಕೊಡುವುದಿಲ್ಲ. ಆನ್‍ಲೈನ್ ಪಾಠವನ್ನು ಸರ್ಕಾರ ಪ್ರಾರಂಭಿಸಿದೆ. ಪಾಲಕರಿಗೆ ಶುಲ್ಕ ಕೊಡುವಂತೆ ಒತ್ತಾಯ ಮಾಡಬಾರದೆಂದು ಹೇಳಿರುವುದರಿಂದ ಆರ್ಥಿಕವಾಗಿ ಸಾಕಷ್ಟು ಸಮರ್ಥರಿದ್ದವರಿಂದಲೂ ಶಿಕ್ಷಣ ಸಂಸ್ಥೆಗಳು ಶುಲ್ಕಕ್ಕಾಗಿ ಒತ್ತಾಯಿಸುವಂತಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ವೇತನ ನೀಡುವುದಕ್ಕೂ ಹಿಂದೇಟು ಹಾಕುತ್ತಿವೆ ಎಂದಿದ್ದಾರೆ.

ಬಾಕಿ ಉಳಿಸಿಕೊಂಡಿರುವ ಆರ್.ಟಿ.ಇ. ಶುಲ್ಕವನ್ನೂ ಸರ್ಕಾರ ಪಾವತಿಸುತ್ತಿಲ್ಲ. ಬಾಕಿ ಪಾವತಿಗೆ ₹700 ಕೋಟಿ ಮೀಸಲಿರಿಸಿದ್ದರೂ ರಾಜ್ಯದ ವಿವಿಧ ಶಾಲೆಗಳಿಗೆ ಪಾವತಿಸಬೇಕಾದ ₹600 ಕೋಟಿ ನೀಡಿಲ್ಲ. ಈ ಎಲ್ಲ ಸಮಸ್ಯೆಗಳ ಬಗ್ಗೆ ಶಿಕ್ಷಣ ಇಲಾಖೆಯ ಜವಾಬ್ದಾರಿ ಹೊತ್ತಿರುವ ಸಚಿವ ಸುರೇಶ್‌ ಕುಮಾರ್‌ ಅವರೂ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!