ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಹಿಳೆ ತನ್ನ ಶಾಲಾ ಸ್ನೇಹಿತನೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ನಡೆದಿದೆ. ರಣವೀರ ರಜಪೂತ ಎಂಬಾತ ಶ್ರೀದೇವಿ ರಜಪೂತ ಎಂಬ ಮಹಿಳೆಗೆ ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕಿರುಕುಳದಿಂದ ಬೇಸತ್ತ ಶ್ರೀದೇವಿ, ತನ್ನ ಶಾಲಾ ಸ್ನೇಹಿತ ಬೈರು ಪವಾರ್ ಬಳಿ ವಿಷಯ ತಿಳಿಸಿದ್ದಾಳೆ. ಬಳಿಕ ಇಬ್ಬರೂ ಸೇರಿ ರಣವೀರನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. ಸೆ.21ರ ರಾತ್ರಿ ಬೈಕ್ ಕೆಟ್ಟಿದೆ ಎಂದು ನಂಬಿಸಿ ಬೈರು, ರಣವೀರನನ್ನು ಏಕಾಂತ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಅಲ್ಲಿ ರಣವೀರನ ಕುತ್ತಿಗೆ ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯದ ಬಳಿಕ ಬೈರು, ಶ್ರೀದೇವಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಪ್ರಕರಣದ ತನಿಖೆ ನಡೆಸಿದ ಅಥಣಿ ಪೊಲೀಸರು ಶ್ರೀದೇವಿ ರಜಪೂತ ಮತ್ತು ಬೈರು ಪವಾರ್ ಅವರನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

