ಶಿರಹಟ್ಟಿ: ತಾಲ್ಲೂಕಿನ ಛಬ್ಬಿ ಗ್ರಾಮದ ಶ್ರೀ ಹೊರ ದುರ್ಗಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಹೊರ ದುರ್ಗಮ್ಮದೇವಿ ಕ್ರಿಕೆಟ್ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ಕ್ರಿಕೆಟ್ ಪಂದ್ಯಾವಳಿಗೆ ಗದಗ-ಬೆಟಗೇರಿ ನಗರಸಭಾಧ್ಯಕ್ಷೆ ಉಷಾ ದಾಸರ ರವಿವಾರ ಚಾಲನೆ ನೀಡಿದ್ದು, ಕ್ರೀಡಾ ಸಮವಸ್ತ್ರ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಕ್ರೀಡೆ ಇಲ್ಲದವನ ಜೀವನ ಕೀಡೆ ತಿಂದ ಹಣ್ಣಿನಂತೆ ಎಂಬ ನಾಣ್ಣುಡಿಯಂತೆ ಮಾನಸಿಕ, ದೈಹಿಕ ಶಕ್ತಿ ವೃದ್ಧಿಗೆ ಕ್ರೀಡೆಗಳು ತುಂಬಾ ಉಪಯುಕ್ತವಾಗಿವೆ ಎಂದರು. ಕ್ರೀಡೆಯು ದೈಹಿಕ ಶ್ರಮ, ಮನರಂಜನೆ, ಮಾನಸಿಕ ಚಟುವಟಿಕೆ ಹಾಗೂ ಸಂಘಟನಾ ಮನೋಭಾವಕ್ಕೆ ಹೆಬ್ಬಾಗಿಲಾಗಿದೆ. ಅಲ್ಲದೇ, ದೈಹಿಕ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಹೀಗಾಗಿ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಆರೋಗ್ಯಯುತ ಜೀವನ ನಡೆಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಜಾನು ಲಮಾಣಿ, ದೇವಪ್ಪ ಲಮಾಣಿ, ಕೇಶವ ಅಂಗಡಿ, ತಿಪ್ಪಣ್ಣ ಲಮಾಣಿ, ಮನವ್ ನಾಯಕ್, ರಾಮಪ್ಪ ಲಮಾಣಿ, ಬಸವರಾಜ್ ಅಡರಕಟ್ಟಿ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದರು.
