ಧಾರವಾಡ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಬೇಕಾಗಿರುವ ಧಾರವಾಡ ಐಐಟಿ ಕೇಂದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕಳ್ಳತನವೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಹದ್ದಿನಲ್ಲಿ ಬರುವ ಐಐಟಿ ಕಟ್ಟಡದ ಕಾಮಗಾರಿ ಈಗಾಗಲೇ ಮುಗಿಯುವ ಹಂತದಲ್ಲಿದೆ. ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಬಂದಾಗಲೇ ಇದರ ಉದ್ಘಾಟನೆಯಾಗಬೇಕಿತ್ತು. ಆದರೆ, ಕೆಲ ಕಾಮಗಾರಿ ಬಾಕಿ ಇದ್ದಿದ್ದರಿಂದ ಇದರ ಉದ್ಘಾಟನೆ ಇದೀಗ ಫೆಬ್ರವರಿ ತಿಂಗಳಿಗೆ ಮುಂದೂಡಲ್ಪಟ್ಟಿದೆ.

ಈ ಕಟ್ಟಡದ ವಿವಿಧ ಸಾಮಗ್ರಿಗಳನ್ನು ಜ.15 ರಂದು ಕಳ್ಳರು ಕಳ್ಳತನ ಮಾಡಿದ್ದರು. ಕಟ್ಟಡದ ಆವರಣದಲ್ಲಿದ್ದ ಪೈಪ್‌ಗಳು, ಕೇಬಲ್‌ಗಳು ಸೇರಿದಂತೆ ಒಟ್ಟು 2,10,405 ಮೌಲ್ಯದ ಕಟ್ಟಡ ಸಾಮಗ್ರಿಗಳನ್ನು ಕಳ್ಳರು ಹೊತ್ತೊಯ್ದಿದ್ದರು. ಈ ಸಂಬಂಧ ಅದೇ ದಿನ ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು, ಐದು ಜನ ಆರೋಪಿಗಳನ್ನು ಬಂಧಿಸಿ, ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಅಲ್ತಾಫ್ ಶೇಖಸನದಿ, ಮಹ್ಮದ್‌ಯಾಸೀನ್, ಖತೀಬ್ ಇಸ್ಮಾಯಿಲ್ ಗಿಡ್ನವರ ಹಾಗೂ ಹಾಶಂಪೀರ್ ಶೇಖಸನದಿ, ಇನಾಂಹೊಂಗಲದ ಇಮ್ರಾನ್ ರಸೂಲನವರ ಎಂದು ಗುರುತಿಸಲಾಗಿದೆ. ಸದ್ಯ ಈ ಆರೋಪಿಗಳನ್ನು ಪೊಲೀಸರು ಕಂಬಿ ಹಿಂದೆ ತಳ್ಳಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

