ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ರಾಷ್ಟ್ರೀಯ ಪಕ್ಷಗಳು ಕರ್ನಾಟಕದತ್ತ ಅತೀ ಹೆಚ್ಚಿನ ಪ್ರವಾಸ ಕೈಗೊಂಡಿದ್ದಾರೆ. ಬಿಎಸ್ ಯಡಿಯೂರಪ್ಪರವರನ್ನು ಮೂಲೆ ಗುಂಪು ಮಾಡಿರುವ ಬಿಜೆಪಿ ಪಾಲಿಗೆ ಕರ್ನಾಟಕ ಪ್ರತಿಷ್ಠೆಯ ಕಣ. ಗುಜರಾತ್ ಗೆದ್ದುಕೊಂಡ ಕಮಲ ಇದೀಗ ದಕ್ಷಿಣದ ಹೆಬ್ಬಾಗಿಲು ಕರ್ನಾಟಕ ಮೇಲೆ ಕಣ್ಣಿಟ್ಟಿದೆ. ಆದ್ರೆ ಕರ್ನಾಟಕ ಈ ಬಾರಿ ಬಿಜೆಪಿಗೆ ಸುಲಭದ ತುತ್ತಲ್ಲ. ಆಡಳಿತ ವಿರೋಧಿ ಅಲೆ, ಸಾಲು ಸಾಲು ಭ್ರಷ್ಟಾಚಾರದ ಆರೋಪ ಬಿಜೆಪಿ ವರ್ಚಸ್ಸನ್ನು ಕುಗ್ಗಿಸಿದೆ. ನಾಯಕರ ನಡುವಿನ ಆಂತರಿಕ ತಿಕ್ಕಾಟ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮೌನ ಬಿಜೆಪಿ ಪಾಲಿಗೆ 2023 ರ ಅಖಾಡ ಕಠಿಣವಾಗಿ ಮಾರ್ಪಟ್ಟಿದೆ. ಈ ಕಾರಣಕ್ಕಾಗಿಯೇ ಮತದಾರರ ಮನ ಗೆಲ್ಲಲು ರಾಷ್ಟ್ರ ನಾಯಕರ ಮೊರೆ ಹೋಗಿದೆ ಬಿಜೆಪಿ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಾಲು ಸಾಲು ರಾಜ್ಯ ಪ್ರವಾಸವೇ ಇದಕ್ಕೆ ಸಾಕ್ಷಿಯಾಗಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೆಲವು ತಿಂಗಳ ಅಂತರದಲ್ಲಿ ಪ್ರಧಾನಿ ಮೋದಿ 4 ಬಾರಿ ರಾಜ್ಯ ಪ್ರವಾಸಕ್ಕೆ ಆಗಮಿಸಿದ್ದಾರೆ. ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಪ್ರವಾಸಕ್ಕೆ ಆಗಮಿಸಿದ್ದ ಮೋದಿ ಇದೀಗ ಗುರುವಾರ ( ಜನವರಿ 19) ಕ್ಕೆ ಕಲಬುರಗಿ ಹಾಗೂ ಯಾದಗಿರಿಗೆ ಭೇಟಿ ನೀಡಲಿದ್ದಾರೆ. ಹುಬ್ಬಳ್ಳಿಯಲ್ಲಿ ರೋಡ್ ಶೋ ನಡೆಸುವ ಮೂಲಕ ಗಮನ ಸೆಳೆದಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

