Breaking News

ಐಐಟಿ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ

ಧಾರವಾಡ: ಉತ್ತಮ ಶಿಕ್ಷಣವು ಪ್ರತಿಯೊಬ್ಬರಿಗೆ ದೊರಕಬೇಕಿದೆ. ಉತ್ತಮ ಶಿಕ್ಷಣ ಸಂಸ್ಥೆ ಆರಂಭಿಸಿದಷ್ಟು ಉತ್ತಮ ಶಿಕ್ಷಣ ದೊರಕುವುದು ಸಾಧ್ಯವಾಗಲಿದೆ. ಆದ್ದರಿಂದ ಉತ್ತಮ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಸರಕಾರ ಆದ್ಯತೆ ನೀಡಿದೆ. ದೇಶದಲ್ಲಿ ಕಳೆದ 9 ವರ್ಷಗಳಿಂದ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. ಗ್ರಾಮೀಣ ರಸ್ತೆ ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲು ಮಾರ್ಗಗಳ ವಿಸ್ತರಣೆ ಹಾಗೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗಿದೆ .ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಇಲ್ಲಿನ ಚಿಕ್ಕಮಲ್ಲಿಗವಾಡದಲ್ಲಿ ನಿರ್ಮಾಣವಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ನೂತನ ಕಟ್ಟಡ ಉದ್ಘಾಟಿಸಿ, ವಿವಿಧ ಯೋಜನೆಗಳ ಲೋಕಾರ್ಪಣೆ ಮಾಡಿ ಮಾತನಾಡಿದರು. ಜಗದ್ಗುರು ಬಸವೇಶ್ವರ ಅವರಿಗೆ ನನ್ನ ನಮಸ್ಕಾರಗಳು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಈ ನಾಡಿನ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತು ಆರಂಭಿಸಿದರು.
ಹುಬ್ಬಳ್ಳಿ, ಬೆಳಗಾವಿ, ಕಲಬುರ್ಗಿ ಮತ್ತಿತರ ಕಡೆಗಳಲ್ಲಿ ರೋಡ್ ಶೋ ಸಂದರ್ಭದಲ್ಲಿ ನೀಡಿದ ಅದ್ಭುತ ಪ್ರೀತಿ. ಮತ್ತು ಆ ಕ್ಷಣ ಮರೆಯಲಾಗದು‌.
ಜನರು ಪ್ರೀತಿ ಮತ್ತು ಆಶೀರ್ವಾದವು ನನ್ನ ಮೇಲಿನ ದೊಡ್ಡ ಋಣವಾಗಿದೆ‌. ನಿರಂತರ ಸೇವೆಯ ಮೂಲಕ ಕರ್ನಾಟಕ ಜನರ ಈ ಋಣವನ್ನು ತೀರಿಸುತ್ತೇನೆ ಎಂದು ಪ್ರಧಾನಮಂತ್ರಿಗಳು ವಿನಮೃತೆಯಿಂದ ಭರವಸೆಯನ್ನು ನೀಡಿದರು. ಡಬಲ್ ಎಂಜಿನ್ ಸರಕಾರವು ರಾಜ್ಯದ ಹಳ್ಳಿ ಹಳ್ಳಿಗಳ ಸಮಗ್ರ ಪ್ರಗತಿಗೆ ಬದ್ಧವಾಗಿದೆ. ಪ್ರಗತಿಯ ಹೊಸ ಶಕೆಯು ಇಡಿ ರಾಜ್ಯದ ಪ್ರಗತಿಗೆ ಮುನ್ನುಡಿ ಬರೆಯಲಿದೆ.
ಮಲೆನಾಡು ಮತ್ತು ಬಯಲುಸೀಮೆಯ ನಡುವಿನ ದ್ವಾರಬಾಗಿಲು ಆಗಿರುವ ಈ ಭಾಗವು ಪ್ರತಿಯೊಬ್ಬರನ್ನು ಪ್ರಿತಿಯಿಂದ ಸ್ವಾಗತಿಸಿದೆ.
ಧಾರವಾಡವು ಕರ್ನಾಟಕ ಮತ್ತು ಭಾರತದ ಜೀವಂತಿಕೆಯ ಪ್ರತಿಬಿಂಬವಾಗಿದೆ.ಧಾರವಾಡದ ಪರಿಚಯವು ದ.ರಾ.ಬೇಂದ್ರೆ, ಸಮೃದ್ಧ ಸಂಗೀತ ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಕುಮಾರ್ ಗಂಧರ್ವ,ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನಸೂರ ಅವರಂತಹ ಸಂಗೀತ ದಿಗ್ಗಜರ ತವರೂರಾಗಿದೆ. ಧಾರವಾಡ ಪೇಢೆಯ ಸ್ವಾದವು ಮರೆಯಲಾರದಂತದು.

ಐಐಟಿಯ ಹೊಸ ಕ್ಯಾಂಪಸ್ ಧಾರವಾಡದ ಪರಿಚಯವನ್ನು ಮತ್ತಷ್ಟು ಬಲಗೊಳಿಸಲಿದೆ. ಕರ್ನಾಟಕದ ವಿಕಾಸದಲ್ಲಿ ಐಐಟಿ ಹೊಸ ಅಧ್ಯಯವಾಗಲಿದೆ. ಇಲ್ಲಿನ ಮೂಲ ಸೌಕರ್ಯಗಳು ಈ ಸಂಸ್ಥೆಯನ್ನು ವಿಶ್ವದ ಮುನ್ನೆಲೆಗೆ ತರಲಿದೆ. ಐಐಟಿ ಸಂಸ್ಥೆಯು ಬಿಜೆಪಿ ಸರಕಾರದ ಸಂಕಲ್ಪದ ಸಿದ್ಧಿಯಾಗಿದೆ. ಶಂಕುಸ್ಥಾಪನೆ ನೆರವೇರಿಸಿದ ನಾಲ್ಕು ವರ್ಷಗಳಿಂದ ಡಬಲ್ ಎಂಜಿನ್ ಸರಕಾರವು ಅದೇ ವೇಗದಲ್ಲಿ ನಡೆದಿದೆ. ಶಂಕುಸ್ಥಾಪನೆ ನೆರವೇರಿಸಿ ಮರೆತುಬಿಡುವ ಕಾಲ ಹೋಯಿತು. ನಾವೇ ಶಂಕುಸ್ಥಾಪನೆ ನೆರವೇರಿಸಿ ನಾವೇ ಲೋಕಾರ್ಪಣೆ ಮಾಡುವುದು ನಮ್ಮ ಬದ್ಧತೆಯಾಗಿದೆ‌. ದೇಶದಲ್ಲಿ ಕೇವಲ 380 ವೈದ್ಯಕೀಯ ಕಾಲೇಜುಗಳಿದ್ದವು 9 ವರ್ಷಗಳಲ್ಲಿ 250 ಕಾಲೇಜು ಸ್ಥಾಪಿಸಲಾಗಿದೆ. ಇದೇ ರೀತಿ ಐಐಟಿ ಗಳನ್ನು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡ ನಗರಗಳು ಅಭಿವೃದ್ಧಿ ಯ ತುತ್ತತುದಿಗೆ ತಲುಪಲಿವೆ. ಜಯದೇವ ಹೃದ್ರೋಗ ಆಸ್ಪತ್ರೆ ಆರಂಭದಿಂದ ಈ ಭಾಗದ ಜನರಿಗೆ ಉತ್ತಮ ಚಿಕಿತ್ಸೆ ಲಭಿಸಲಿದೆ.

ಜಲಜೀವನ್ ಮಿಷನ್ ಯೋಜನೆ ಮೂಲಕ 1 ಸಾವಿರ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಮಲಪ್ರಭಾ ನದಿಯ ನೀರನ್ನು ನಳಗಳ ಮೂಲಕ ಮನೆ ಮನೆಗೆ ತಲುಪಿಸಲಾಗುವುದು. ತುಪ್ಪರಿಹಳ್ಳದ ಯೋಜನೆ ಮೂಲಕ ಪ್ರವಾಹ ಹಾನಿ ತಪ್ಪಿಸಲಿದೆ.

ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ವಿಶ್ವದ ಅತೀ ದೊಡ್ಡ ಫ್ಲ್ಯಾಟ್ ಫಾರ್ಮ್ ಇದು ದಾಖಲೆಯಲ್ಲ; ಮೂಲಸೌಕರ್ಯ ಅಭಿವೃದ್ಧಿಗೆ ನಾವು ನೀಡಿದ ಆದ್ಯತೆ ಗೆ ಸಾಕ್ಷಿಯಾಗಿದೆ. ರೈಲು ಮಾರ್ಗದ ವಿದ್ಯುದ್ದೀಕರಣದಿಂದ ತೈಲದ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಪರಿಸರ ರಕ್ಷಣೆಗೂ ಸಹಕಾರಿಯಾಗಲಿದೆ. ರಸ್ತೆ, ಸಾರಿಗೆ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸುವುದರಿಂದ ಪ್ರತಿಯೊಬ್ಬರಿಗೂ ಅನುಕೂಲ ವಾಗುತ್ತಿದೆ. ಹಳ್ಳಿ ಹಳ್ಳಿಗೆ ಅಂತರ್ಜಾಲ ಸಂಪರ್ಕವನ್ನು ಒದಗಿಸಿರುವುದರಿಂದ ಇಂದು ಭಾರತವು ಜಗತ್ತಿನ ಡಿಜಿಟಲ್ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ. ಪಿಎಂ -ಗತಿಶಕ್ತಿ ಮಾಸ್ಟರ್ ಪ್ಲ್ಯಾನ್ ಮೂಲಕ ಅಗತ್ಯ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಆಸ್ಪತ್ರೆ, ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಭವಿಷ್ಯದ ಭಾರತ ನಿರ್ಮಾಣಕ್ಕೆ ಶ್ರಮಿಸಲಾಗುತ್ತಿದೆ.

ಬಸವಣ್ಣನವರು ಅನುಭವ ಮಂಟಪ ಸ್ಥಾಪನೆ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮುನ್ನುಡಿ ಬರೆದಿದ್ದಾರೆ. ಲಂಡನ್ ನಲ್ಲಿ ಬಸವೇಶ್ವರ ಪುತ್ಥಳಿ ಲೋಕಾರ್ಪಣೆ ಅವಕಾಶ ಸಿಕ್ಕಿತ್ತು. ಆದರೆ ಅದೇ ಲಂಡನ್‌ ನಲ್ಲಿ ಇತ್ತೀಚೆಗೆ ಭಾರತದ ಪ್ರಜಾಪ್ರಭುತ್ವ ಕ್ಕೆ ಅವಮಾನಿಸುವ ಮಾತುಗಳನ್ನು ಕೇಳುವುದು ದೌರ್ಭಾಗ್ಯವಾಗಿದೆ ಎಂದು ಹೇಳಿದರು. ಇಂತಹ ಮಾತುಗಳು ಭಾರತದ ಪರಂಪರೆಗೆ ಮಾತ್ರವಲ್ಲ; ಇಡೀ ಭಾರತೀಯರಿಗೆ ಅವಮಾನಿಸಿದಂತಾಗಿದೆ.

ಕರ್ನಾಟಕವು ಹೈಟೆಕ್ ಇಂಡಿಯಾದ ಎಂಜಿನ್ ಆಗಿದೆ ಎಂದು ಬಣ್ಣಿಸಿದ ಅವರು, ಡಬಲ್ ಎಂಜಿನ್ ಸರಕಾರಕ್ಕೆ ಇಲ್ಲಿನ ಜನರ ಆಶೀರ್ವಾದ ಬಲ ತುಂಬಲಿದೆ ಎಂದು ಪ್ರಧಾನಿ ಹೇಳಿದರು.

Share News

About BigTv News

Check Also

ಮೀನು ಕದ್ದ ಆರೋಪ : ಮರಕೆ ಕಟ್ಟಿ ಮಹಿಳೆ ಮೇಲೆ ಹಲ್ಲೆ

ಮೀನು ಕದ ಆರೋಪದಡಿ ಮಹಿಳೆ ಒಬ್ಬರನ್ನು ಮರಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ …

Leave a Reply

Your email address will not be published. Required fields are marked *

You cannot copy content of this page