ಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ನೋಡಿದ್ರೆ ಒಂದು ಸಣ್ಣ ಹುಡುಗ ಕೂಡಾ ಭಯ ಪಡುವುದಿಲ್ಲ, ಅದರಲ್ಲಿ ವಿಶ್ವದ ನಂಬರ್ ಒನ್ ನಾಯಕ ನರೇಂದ್ರ ಮೋದಿ ಅವರು ಭಯ ಪಡುತ್ತಾರೆಂದರೆ ಇದು ಈ ವರ್ಷದ ಜೋಕ್ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ನೋಡಿದ್ರೆ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್‌ನವರಿಗೆ ಭಯ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನರೇಂದ್ರ ಮೋದಿ ಅವರು ಯಾಕೆ ಭಯ ಪಡಬೇಕು? ಇದೀಗ ಜಗತ್ತು ಮೋದಿ ಅವರನ್ನು ಮೆಚ್ಚುತ್ತಿದೆ. ಅವರೊಬ್ಬ ಜಗತ್ತಿನ ನಂಬರ್ ಒನ್ ನಾಯಕ. ಹೀಗಾಗಿ ಸಿದ್ದರಾಮಯ್ಯ ಈ ರೀತಿಯ ಕೆಳಮಟ್ಟದ ಹೇಳಿಕೆ ಕೊಡುವ
ಅವರ ವ್ಯಕ್ತಿತ್ವ ಬೆಳವಣಿಗೆ ಆಗೋದಿಲ್ಲ, ರಾಜಕೀಯವಾಗಿಯೂ ಬೆಳೆಯುವುದಿಲ್ಲ ಎಂದು ಹರಿಹಾಯ್ದರು.
ಬಿಜೆಪಿ ಮುಸ್ಲಿಂ ವಿರೋಧಿ ಎಂದು ಯಾವತ್ತೂ ಬಿಂಬಿಸಿಕೊಂಡಿಲ್ಲ, ಆರ್‌ಸ್ಎಸ್ ಹಿಂದೂಗಳ ಸಂಘಟನೆ ಮಾಡುತ್ತದೆ. ಆದರೆ ಬಿಜೆಪಿ ನಿಜವಾದ ಸೆಕ್ಯೂಲರ್ ಬಗ್ಗೆ ಹೇಳುತ್ತದೆ. ಆದರೆ ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ತನ್ನ ಮತಬ್ಯಾಂಕ್ ಆಗಿ ಬಳಕೆಮಾಡಿಕೊಂಡು ಬರುತ್ತಿದೆ. ಮುಸ್ಲಿಂ ಸಮುದಾಯದ ಜನರು ಭಾರತ ದೇಶದ ನಾಗರಿಕರಾಗಿ ಬದುಕಬೇಕು. ಎಲ್ಲರೂ ಸಹೋದರತ್ವದಿಂದ ಬಾಳಬೇಕು ಎಂಬುದು ನಮ್ಮ ಉದ್ದೇಶ ಎಂದರು.
ಬಿಜೆಪಿ ಯಾವತ್ತೂ ಮುಸ್ಲಿಮರನ್ನು ದೇಶದಿಂದ ಹೊರಹಾಕಬೇಕು, ವಿರೋಧ ಮಾಡಬೇಕು ಎಂದು ಹೇಳಿಲ್ಲ.ಆ ರೀತಿಯಾಗಿ ಬಿಂಬಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಎಲ್ಲ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು
ಹೋಗಿ ಎಂದು ಹೇಳಿದ್ದಾರೆ ಎಂದರು.