ಧಾರವಾಡ: ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಸಾಕಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷವು 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಅಧ್ಯಕ್ಷ ಚಾಮರಸ ಮಾಲಿಪಾಟೀಲ ತಿಳಿಸಿದರು.
ರಾಜಕೀಯದಿಂದ ಭ್ರಷ್ಟಾಚಾರವನ್ನು ದೂರ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ಬಾರಿ ಯುವ ಸಮುದಾಯಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಲಾಗುತ್ತಿದೆ, ರಾಜಕೀಯ ಎಂಬುದು ಹಣ ಗಳಿಕೆಯ ಉದ್ಯೋಗವಲ್ಲ ಅದು ಸೇವಾ ಕ್ಷೇತ್ರ ಎಂಬುದನ್ನು ಯುವಜನತೆಗೆ ತಿಳಿಸುವ ಕೆಲಸವನ್ನು ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜ್ಯದಲ್ಲಿರುವ ಎಲ್ಲ ಪಕ್ಷಗಳೂ ಪರಸ್ಪರ ಕಚ್ಚಾಡುತ್ತ ಜನರ ದಾರಿ ತಪ್ಪಿಸುತ್ತಿವೆ. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿರುವ ಭದ್ರಾ ಮೇಲ್ದಂಡೆ ಯೋಜನೆಗೆ ₹5,300ಕೋಟಿ ನೀಡಿರುವುದು ಚುನಾವಣೆಗೆ ಖರ್ಚು ಮಾಡುವ ಸಲುವಾಗಿಯೇ ಹೊರತು, ರೈತರಿಗಲ್ಲ. ಇಂಥ ಹುಸಿ ಭರವಸೆಗಳಿಗೆ ರೈತರು ಮರುಳಾಗಬಾರದು ಎಂದು ಚಾಮರಸ ಹೇಳಿದರು.
ರಾಜ್ಯ ರೈತ ಸಂಘದ ಮುಖಂಡ ರವಿಕಿರಣ್ ಪೂಣಚ್ಚ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಫೆ.16ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಬಳಿ ಪ್ರತಿಭಟನಾ ಸಮಾವೇಶವನ್ನು ರೈತ ಸಂಘದಿಂದ ಆಯೋಜಿಸಲಾಗಿದೆ. ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ, ಕಾರ್ಮಿಕ ವಿರೋಧಿ ನೀತಿ ಸೇರಿದಂತೆ ಪ್ರಸ್ತುತ ಜ್ವಲಂತ ಸಮಸ್ಯೆಗಳ ಕುರಿತು ರಾಜ್ಯದಾದ್ಯಂತ ಲಕ್ಷಾಂತರ ರೈತರು, ಪರಿಶಿಷ್ಟರು, ಕಾರ್ಮಿಕರು ಸೇರಿದಂತೆ ಹೋರಾಟಗಾರರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು. ನಾಗಪ್ಪ ಉಂಡಿ ಇದ್ದರು.
