ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದ್ದು, ಕೋವಿಡ್ ನಿರ್ವಹಣೆಯಲ್ಲಿ ನಮ್ಮ ಪ್ರಧಾನಿಗಳು ಲಸಿಕೆ, ಔಷದ, ಅನ್ನ ಕೊಡುವ ಮೂಲಕ ಎಲ್ಲರನ್ನು ಆರೋಗ್ಯದ ಸುರಕ್ಷಾ ಚಕ್ರವನ್ನು ನೀಡಿದ್ದಾರೆ. ಈಗ ಯಾರೂ ಮಾಸ್ಕ್ ಹಾಕದೇ ತಿರುಗಾಡುವಂತಾಗಲು ಮೋದಿಯವರ ಶ್ರಮ ಕಾರಣ. ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ರಾಜ್ಯದಲ್ಲಿ 54 ಲಕ್ಷ ರೈತರಿಗೆ ನೇರವಾಗಿ ಹಣವನ್ನು ಅವರ ಖಾತೆಗೆ ತುಂಬುವ ವ್ಯವಸ್ಥೆ ಮಾಡಿದ್ದಾರೆ. ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದು ಇದರಿಂದ 13 ಲಕ್ಚ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಮೈಸೂರಿನಲ್ಲಿ 20 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ರೈತ ವಿದ್ಯಾನಿಧಿಯಿಂದ ಅನುಕೂಲವಾಗಿದೆ ಎಂದರು.
ಹೆಣ್ಣು ಮಕ್ಕಳಿಗೆ ಡಿಗ್ರಿವರೆಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಸ್ತ್ರೀ ಸಾಮರ್ಥ್ಯ ಯೋಜನೆ ಅಡಿಯಲ್ಲಿ 5 ಲಕ್ಷದ ವರೆಗೆ ಸಾಲ ನೀಡಲಾಗುತ್ತದೆ. ಇದರಿಂದ 3 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ. ಸ್ವಾಮಿ ವಿವೇಕಾನಂದ ಯೋಜನೆಯಿಂದ 2 ಲಕ್ಷಕ್ಕೂ ಹೆಚ್ಚು ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಸಿಡ್ ದಾಳಿಗೆ ಒಳಗಾದ ಹೆಣ್ಣು ಮಕ್ಕಳಿಗೆ 10 ಸಾವಿರ ರೂ. ನೀಡಲಾಗುತ್ತಿದೆ. ಹುಟ್ಟಿನಿಂದಲೇ ಕಿವುಡರಾದರಿಗೆ ಕಾಂಕ್ಲಿಯರ್ ಇನ್ಫ್ಲಾಂಟ್ ಗಾಗಿ ಯೋಜನೆ ರೂಪಿಸಿದ್ದೇವೆ. ಇದಕ್ಕೆ 500 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ.60 ವರ್ಷ ಮೇಲ್ಪಟ್ಟವರಿಗೆ ಕಣ್ಣಿನ ತಪಾಸಣೆ ಮಾಡಿ ಶಸ್ತ್ರಚಿಕಿತ್ಸೆ ಮಾಡುವ ಯೋಜನೆಯನ್ನು 4 ಜಿಲ್ಲೆಯಲ್ಲಿ ಪ್ರಾರಂಭಿಸಿದ್ದು, ಮುಂದಿನ ವರ್ಷ ಎಲ್ಲಾ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಡಯಾಲಿಸಿಸ್ ಸೈಕಲ್ ಗಳನ್ನು 1 ಲಕ್ಷಕ್ಕೆ ಏರಿಸಲಾಗಿದೆ. ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು ಕಾರ್ಯಕ್ರ ರೂಪಿಸಲಾಗಿದೆ. ಕೀಮೋಥೆರಪಿ ಉಚಿತವಾಗಿ ನಿಡಲಾಗುತ್ತಿದೆ. ಜನರ ಸಂಕಷ್ಟ ನೋವು ನಮಗೆ ತಿಳಿದಿದೆ. ಕರ್ನಾಟಕದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನೌಷಧ ಕೇಂದ್ರವನ್ನು ತೆರೆಯಲಾಗಿದೆ ಎಂದು ವಿವರಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದವರಿಗೆ ಮೀಸಲಾತಿ ಹೆಚ್ಚಿಸಿ, ಅವರ 40 ವರ್ಷದ ಬೇಡಿಕೆಯನ್ನು ಪೂರೈಸಲಾಗಿದೆ. ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿಗೊಳಿಸಿದ್ದೇವೆ. ಪ್ರತಿ ಕ್ಷೇತ್ರದಲ್ಲಿ 100 ಎಸ್ಸಿ ಎಸ್ಟಿ ಯುವಕರಿಗೆ ಸ್ಕೂಟರ್ ನೀಡಿ ಸ್ವಯಂ ಉದ್ಯೋಗ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಮಿಕರ ಮಕ್ಕಳಿಗೆ ವಿಶೇಷವಾಗಿ 4000 ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ. ಸ್ಲಂಗಳಲ್ಲಿರುವವರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಪ್ರತಿ ವಾರ್ಡ್ ನಲ್ಲಿ ನಮ್ಮ ಕ್ಲಿನಿಕ್, ಬೀದಿ ಬದಿ ವ್ಯಾಪಾರಿಗಳಿಗೆ ಅನುದಾನ ನೀಡಿ ಸಶಕ್ತರನ್ನಾಗಿಸಲಾಗುತ್ತಿದೆ. ಇಂತಹ ಜನಪರ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡಿದರೆ, ಇನ್ನಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು.
ಈಗ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೇ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತಾ ಸರ್ಕಾರ ಎಲ್ಲ ಕೆಲಸಗಳನ್ನು ಮಾಡಿ ನೈತಿಕತೆಯಿಂದ ಜನರ ಮುಂದೆ ನಿಲ್ಲಲಾಗಿದೆ. ನಾಡಿನ ಜನ ಶ್ರೀಮಂತರಾದರೆ, ರಾಜ್ಯ ಶ್ರೀಮಂತವಾಗುತ್ತದೆ. ಯುವಕರು, ಮಹಿಳೆಯರು, ಅಸಹಾಯರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ. ಜನರ ಹಕ್ಕುಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವವರಿಗೆ ಜನರ ಬೆಂಬಲವಿರಬೇಕು ಎಂದರು. ನಮ್ಮ ಸರ್ಕಾರ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲ್ಲ ನಮ್ಮ ಸರ್ಕಾರ ಜನರ ಊರುಗಳಲ್ಲಿ , ಜನರ ಮನೆಗಳಲ್ಲಿ ಇದೆ. ಜನರು ಬಡತನವನ್ನು ತಮ್ಮ ದುಡಿಮೆಯಿಂದ ಬದಲಾಯಿಸಬಹುದು, ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ನಮ್ಮ ಸಾಧನೆ ನಿಮ್ಮ ಮುಂದೆ ಇದೆ. ಮತ್ತೊಮ್ಮೆ ನಮಗೆ ಬೆಂಬಲ ನೀಡುವ ಮೂಲಕ , ಸಾರ್ಥಕ ಸಮೃದ್ದಿಯ ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣ ಮಾಡೋಣ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, ಶಾಸಕರಾದ ಎಲ್. ನಾಗೇಂದ್ರ, ಎಸ್.ಎ. ರಾಮದಾಸ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
