Breaking News

ಚುನಾವಣಾ ಅಕ್ರಮ ತಡೆಯಲು ತೀವ್ರ ನಿಗಾ : ಸಮಗ್ರ ಮಾಹಿತಿ ನೀಡಿದ ಚುನಾವಣಾ ಅಧಿಕಾರಿ ಭರತ್.ಎಸ್.

ಧಾರವಾಡ : ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ-74 ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 266 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಮತದಾರ ಸ್ನೇಹಿ ಮತಗಟ್ಟೆ ಮಾಡಲು ಕ್ರಮ ವಹಿಸಲಾಗಿದೆ. 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಭಾರತ ಚುನಾವಣಾ ಆಯೋಗ ಕಲ್ಪಿಸಿದ್ದು, ತೀರಾ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ 80 ವರ್ಷ ಮೇಲ್ಪಟ್ಟ ಮತದಾರರು ತಮ್ಮ ಹೆಸರು ಇರುವ ಮತಗಟ್ಟೆಗೆ ಬಂದು ಮತ ಹಾಕುವ ಮೂಲಕ ಇತರರಿಗೆ ಮಾದರಿಯಾಗಬೇಕೆಂದು ಹುಬ್ಬಳ್ಳಿ-ಧಾರವಾಡ ಪಶ್ಚಿಮ-74 ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಭರತ್ .ಎಸ್. ಅವರು ಹೇಳಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಚುನಾವಣಾ ಅಕ್ರಮಗಳು ನಡೆಯದಂತೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ದೂರುಗಳನ್ನು ನೀಡಲು ಸಹಾಯವಾಣಿ ಸಂಖ್ಯೆ 0836-2446133 ಅನ್ನು ಆರಂಭಿಸಲಾಗಿದೆ. ಮತಕ್ಷೇತ್ರದ ನಾಲ್ಕು ಕಡೆಗೆ ಗೋವಾ ರೋಡ್, ಹಳಿಯಾಳ ರೋಡ್, ಕಲಘಟಗಿ ರೋಡ್ ಮತ್ತು ಗೋಕುಲ ರೋಡ್‍ಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದ್ದು, ದಿನದ 24 ಗಂಟೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ ಎಂದು ಧಾರವಾಡ ಕಚೇರಿಯ ಆಯುಕ್ತರ ಸಭಾಂಗಣದಲ್ಲಿರುವ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಸುದ್ಧಿಗೋಷ್ಠಿ ನಡೆಸಿ, ಹೇಳಿದರು.

ಅಂತಿಮ ಮತದಾರರ ಪಟ್ಟಿಯು ಪ್ರಕಟಗೊಂಡ ನಂತರ ಪ್ರಸ್ತುತ 29-03-2023ಕ್ಕೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ-74 ವಿಧಾನಸಭಾ ಮತಕ್ಷೇತ್ರದಲ್ಲಿ ಪುರುಷ-1,28,085, ಮಹಿಳೆ-1,31,736, ಇತರೆ-4 ಸೇರಿದಂತೆ ಒಟ್ಟು 2,59,825 ಮತದಾರರಿದ್ದಾರೆ. ಮತ್ತು ಕ್ಷೇತ್ರವ್ಯಾಪ್ತಿಯಲ್ಲಿ ಗಂಡು-160, ಹೆಣ್ಣು-10 ಒಟ್ಟು-170 ಸೇವಾ ಮತದಾರರಿದ್ದಾರೆ. ಸೇವಾ ಮತದಾರರನ್ನು ಒಳಗೊಂಡಂತೆ ಪ್ರಸ್ತುತ ಒಟ್ಟು 2,59,995 ಮತದಾರರಿದ್ದಾರೆ.

ದಿ:01-04-2023ಕ್ಕೆ 18 ವರ್ಷ ಪೂರ್ಣಗೊಳ್ಳುವ ಅರ್ಹ ಮತದಾರರು ಸೇರ್ಪಡೆಯಾಗಲು ಬಾಕಿ ಇದ್ದಲ್ಲಿ ಈಗಲೂ ಹೆಸರು ಸೇರಿಸಲು ಅವಕಾಶವಿದೆ. ಮತ್ತು ಮತದಾರರ ಪಟ್ಟಿಯಲ್ಲಿ ಒಟ್ಟು ಶೇ. 100 ರಷ್ಟು ಮತದಾರರ ಭಾವಚಿತ್ರಗಳು ಲಭ್ಯವಿದೆ.

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು ಮತದಾರರ ಶೇ.100 ರಷ್ಟು ಗುರುತಿನ ಚೀಟಿ ವಿತರಿಸಲಾಗಿದೆ. ದಿನಾಂಕ:05.01.2023 ರಿಂದ ಬಾಕಿ ಇರುವ 15439 ಮತದಾರರ ಗುರುತಿನ ಚೀಟಿಗಳನ್ನು ಅಂಚೆ ಮೂಲಕ ವಿತರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಒಟ್ಟು 266 ಮುಖ್ಯ ಮತಗಟ್ಟೆಗಳಿವೆ. ಹಾಗೂ 1450ಕ್ಕಿಂತ ಹೆಚ್ಚು ಮತದಾರರಿರುವ ಒಟ್ಟು 7 ಮತಗಟ್ಟೆಗಳಿಗೆ ಹೆಚ್ಚುವರಿ ಮತಗಟ್ಟೆಗಳೆಂದು ಘೋಷಿಸಲು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಎಲ್ಲ ಮತಗಟ್ಟೆಗಳಲ್ಲಿ ಮತದಾನಕ್ಕೆ ಅವಶ್ಯಕವಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ವಿಶೇಷಚೇತನ ಮತದಾರರಿಗಾಗಿ ಗಾಲಿ ಖುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿದೆ.

ಲಿಂಗ ಸಮಾನತೆಯನ್ನು ಸಾಧಿಸಲು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಕೆಲವು ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಈ ಮತಗಟ್ಟೆಗಳಲ್ಲಿ ಎಲ್ಲ ಅಧಿಕಾರಿಗಳು ಮಹಿಳೆಯರೇ ಆಗಿರುವುದು ಒಂದು ವಿಶೇಷ.

ಪ್ರಸ್ತುತ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುವುದು ಹಾಗೂ ಮತದಾನ ಖಾತ್ರಿ ಯಂತ್ರಗಳನ್ನು (ವಿವಿಪ್ಯಾಟ್) ಕೂಡ ಬಳಸಲಾಗುತ್ತಿದೆ. ಮತಗಟ್ಟೆಗಳಿಗೆ ಬಳಸಲಾಗುವ ಎಲ್ಲ ಮತಯಂತ್ರಗಳನ್ನು 2 ಹಂತದಲ್ಲಿ ರ್ಯಾಂಡಮೈಜೇಷನ್ ಮಾಡಲಾಗುವುದು. ಈ ಪ್ರಕ್ರಿಯೆಯನ್ನು ವೀಕ್ಷಕರ ಹಾಗೂ ಅಭ್ಯರ್ಥಿಗಳ ಅಥವಾ ಅವರ ಏಜೆಂಟರ ಸಮ್ಮುಖದಲ್ಲಿ ಮಾಡಲಾಗುವುದು.

ಮಾಕ್ ಪೋಲ್ ಇವಿಎಂ ಮತ್ತು ವಿವಿಪ್ಯಾಟ್‍ಗಳ ಕುರಿತು ಈಗಾಗಲೇ ಸೆಕ್ಟರ್ ಅಧಿಕಾರಿಗಳ ಮುಖಾಂತರ ವ್ಯಾಪಕ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ರಾಜಕೀಯ ಪಕ್ಷದ ಮುಖಂಡರುಗಳಿಗೆ ಹಾಗೂ ಮತದಾರರಿಗೆ ತಿಳುವಳಿಕೆ ನೀಡಲಾಗಿದೆ.

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 170 ಸೇವಾ ಮತದಾರರು ಇದ್ದು, ವಿದ್ಯುನ್ಮಾನ ರೀತಿಯಲ್ಲಿ (ಇಟಿಪಿಬಿಎಸ್) ಮತಪತ್ರಗಳ ಸಾಪ್ಟ್ ಪ್ರತಿಗಳನ್ನು ಸೇವಾ ಮತದಾರರಿಗೆ ಕಳುಹಿಸಲಾಗುವುದು.

80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು, ವಿಕಲಚೇತನ ವ್ಯಕ್ತಿಗಳು, (ಪಿಡಬ್ಲುಡಿ) ಹಾಗೂ ಕೋವಿಡ್ ಸೊಂಕಿತ ವ್ಯಕ್ತಿಗಳಿಗೆ ಅಂಚೆ ಮತದಾನದ ಮೂಲಕ ಮತದಾನ ಚಲಾಯಿಸಲು ಅವಕಾಶ ನೀಡಿದ್ದು, ಇದೇ ಮೊದಲ ಬಾರಿಗೆ ಮನೆಯಿಂದಲೇ ಅಂಚೆ ಮತದಾನದ ಮೂಲಕ ಮತದಾನ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಚುನಾವಣೆಯನ್ನು ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಮತ್ತು ಶಾಂತಿಯುತವಾಗಿ ಜರುಗಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಕ್ಕೆ ಅನುಗುಣವಾಗಿ ಎಂಸಿಸಿ ತಂಡ-1, ಸೆಕ್ಟರ್ ಅಧಿಕಾರಿಗಳ ತಂಡ-23, ವಿವಿಟಿ ತಂಡ-2, ಎಫ್‍ಎಸ್‍ಸಿ ತಂಡ-3, ವಿಎಸ್‍ಟಿ ತಂಡ-2, ಎಸ್‍ಎಸ್‍ಟಿ ತಂಡ-4, ಲೆಕ್ಕಪತ್ರ ತಂಡ-1, ಎಎಲ್‍ಎಂಟಿ ತಂಡ-5, ವೆಚ್ಚ ತಂಡ-1 ಹೀಗೆ ಒಟ್ಟು 9 ತಂಡಗಳನ್ನು ರಚಿಸಲಾಗಿದ್ದು, ಸಾರ್ವಜನಿಕರ ಮಾಹಿತಿಗಾಗಿ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ತಂಡಗಳ ಸಂಪರ್ಕ ಸಂಖ್ಯೆಗಳನ್ನು ಪ್ರಕಟಿಸಲಾಗಿದೆ.

ದಿನಾಂಕ :29.03.2023 ರಿಂದ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆಯು ಅನ್ವಯವಾಗುತ್ತದೆ. ಈ ಮಾದರಿ ನೀತಿ ಸಂಹಿತೆಯು ಎಲ್ಲ ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳಿಗೆ ಹಾಗೂ ಸರ್ಕಾರದ ಎಲ್ಲ ಇಲಾಖೆಗಳಿಗೆ ಅನ್ವಯವಾಗುತ್ತದೆ. ಈ ಮಾದರಿ ನೀತಿ ಸಂಹಿತೆಯ ವಿವಿಧ ಆಯಾಮಗಳನ್ನು ಎಲ್ಲರೂ ಪಾಲಿಸುವುದು ಅವಶ್ಯಕವಾಗಿದೆ.

ಅಭ್ಯರ್ಥಿಗಳು ಎಲ್ಲ ವಿಧದ ಸಭೆ, ಸಮಾರಂಭ, ರೋಡ್ ಷೋ ಮುಂತಾದ ಕಾರ್ಯಕ್ರಮಗಳ ಅನುಮತಿಗಾಗಿ ಸು-ವಿದಾ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬೇಕು. ಈ ಕುರಿತು ಅನುಮತಿ ನೀಡುವ ಬಗ್ಗೆ ಏಕಗವಾಕ್ಷಿ ಸಮಿತಿಯನ್ನು ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ-3 ರಲ್ಲಿ ರಚಿಸಲಾಗಿದೆ.

ಅಭ್ಯರ್ಥಿಗಳು ಚುನಾವಣೆಯ ಸಂದರ್ಭದಲ್ಲಿ ಕೈಗೊಳ್ಳುವ ಎಲ್ಲ ವಿಧದ ವೆಚ್ಚಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು. ಈ ಕಾರ್ಯಕ್ಕಾಗಿ ಈ ವಿಧಾನಸಭಾ ಕ್ಷೇತ್ರದಲ್ಲಿ ಫ್ಲೈಯಿಂಗ್ ಸ್ಕ್ವಾಡ್, ಚೆಕ್‍ಪೋಸ್ಟ್, ವಿಡಿಯೋ ಪರಿಶೀಲನಾ ತಂಡ ಹಾಗೂ ವೆಚ್ಚ ಪರಿಶೀಲನಾ ತಂಡಗಳನ್ನು ರಚಿಸಲಾಗಿದೆ. ಅಭ್ಯರ್ಥಿಗಳು ಕಾಲ ಕಾಲಕ್ಕೆ ಸಲ್ಲಿಸುವ ವೆಚ್ಚಗಳನ್ನು ಪರಿಶೀಲಿಸಲು ತಂಡವನ್ನು ರಚಿಸಲಾಗಿದೆ ಎಂದು ಚುನಾವಣಾಧಿಕಾರಿ ಭರತ್ .ಎಸ್. ಅವರು
ಈ ಬಾರಿಯ ಚುನಾವಣೆಯ ಕುರಿತು ಸಮಗ್ರ ಮಾಹಿತಿಯನ್ನು ನೀಡಿದ್ದಾರೆ.

ಇಂದು ಸಂಜೆ ಮಹಾನಗರ ಪಾಲಿಕೆಯ ಧಾರವಾಡ ಕಚೇರಿಯ ಆಯುಕ್ತರ ಸಭಾಂಗಣದಲ್ಲಿರುವ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಸುದ್ಧಿಗೋಷ್ಠಿ ನಡೆದಿದ್ದು, ಸುದ್ಧಿಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಯಶವಂತಕುಮಾರ, ಸಹಾಯಕ ಮತದಾರ ನೋಂದಣಿ ಅಧಿಕಾರಿ ಉಮೇಶ ಸವಣೂರ ಉಪಸ್ಥಿತರಿದ್ದರು.

Share News

About BigTv News

Check Also

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ: ಅವಳಿನಗರದಲ್ಲಿ ಹೆಚ್ಚಿದ ಬೆಟ್ಟಿಂಗ್ ಭರಾಟೆ..

ಹುಬ್ಬಳ್ಳಿ: ಲೋಕ ಚುನಾವಣೆ ಫಲಿತಾಂಶದ ಮೇಲೆ ಬೆಟ್ಟಿಂಗ್ ಜೋರಾಗಿದೆ. ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಕಾಂಚಾಣ ಕುಣಿಯುತ್ತಿದೆ. ಐಪಿಎಲ್ ಕ್ರಿಕೆಟ್ ಮ್ಯಾಚ್‌ಗಳ …

Leave a Reply

Your email address will not be published. Required fields are marked *

You cannot copy content of this page