Breaking News

ಬಾಗಲಕೋಟೆಯಲ್ಲಿ ಇಂದು ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮಾತುಗಳು:

2018ರಲ್ಲಿ ನಮ್ಮ ಸರ್ಕಾರದ ಕಡೇ ಬಜೆಟ್ ಅನ್ನು ಮಂಡಿಸಿದ್ದೆ, ಅದರಲ್ಲಿ ನಾವು ಅಧಿಕಾರಕ್ಕೆ ಬರುವ ಪೂರ್ವದಲ್ಲಿ ನೀಡಿದ್ದ ಭರವಸೆಗಳು ಹಾಗೂ ಅಧಿಕಾರಕ್ಕೆ ಬಂದ ನಂತರ ಈಡೇರಿಸಿದ ಭರವಸೆಗಳು ಯಾವುವು ಹಾಗೂ ಮುಂದೆ ಏನು ಮಾಡುತ್ತೇವೆ ಎಂಬುದನ್ನು ಹೇಳಿದ್ದೆ. 2013ರ ಚುನಾವಣೆಯಲ್ಲಿ ರಾಜ್ಯದ ಜನರಿಗೆ 165 ಭರವಸೆಗಳನ್ನು ನೀಡಿದ್ದೆ, ಅವುಗಳಲ್ಲಿ 158 ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಆದರೆ ರಾಜ್ಯ ಬಿಜೆಪಿ ಅವರು 2018ರಲ್ಲಿ ಜನರಿಗೆ 600 ಭರವಸೆಗಳನ್ನು ನೀಡಿದ್ದರು. ಇದರಲ್ಲಿ 50 ರಿಂದ 60 ಭರವಸೆಗಳನ್ನು ಕೂಡ ಈಡೇರಿಸಲು ಅವರಿಂದ ಸಾಧ್ಯವಾಗಿಲ್ಲ. ಈಗ ಮತ್ತೆ ಚುನಾವಣೆ ಹತ್ತಿರ ಬಂದಿರುವುದರಿಂದ ಬೊಮ್ಮಾಯಿ ಅವರು ಫೆಬ್ರವರಿ 17ಕ್ಕೆ ಬಜೆಟ್‌ ಮಂಡಿಸುವ ಘೋಷಣೆ ಮಾಡಿದ್ದಾರೆ, ಇದರಲ್ಲಿ ಏನೆಲ್ಲ ಘೋಷಣೆ ಮಾಡಲು ಸಾಧ್ಯ ಅವೆಲ್ಲವನ್ನು ಘೋಷಿಸಿ, ಒಂದನ್ನೂ ಈಡೇರಿಸಲ್ಲ. ಇಂಥಾ ಭರವಸೆಗಳನ್ನು ನೀವು ನಂಬಬೇಡಿ.

ಬಿಜೆಪಿ ಅವರು 2018ರಲ್ಲಿ ಮಹಿಳೆಯರಿಗೆ 21 ಭರವಸೆಗಳನ್ನು ನೀಡಿ, ಅವರನ್ನು ಉದ್ಧಾರ ಮಾಡುವುದಾಗಿ ಹೇಳಿದ್ದರು, ಈಗ ಬಿಜೆಪಿ ಆಡಳಿತದ ಮೂರುವರೆ ವರ್ಷಗಳಲ್ಲಿ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಈ ವಿಚಾರವನ್ನು ಅವರು ತಮ್ಮ ಪ್ರಣಾಳಿಕೆಯೊಂದಿಗೆ ಬರಲಿ, ನಾನು ನಮ್ಮ ಪ್ರಣಾಳಿಕೆಯೊಂದಿಗೆ ಬರುತ್ತೇನೆ, ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ. ಬೇರೆಯವರಿಗೆ ಧಮ್‌, ತಾಕತ್‌ ಪ್ರಶ್ನೆ ಮಾಡುವ ಬೊಮ್ಮಾಯಿ ಅವರು ಒಂದೇ ವೇದಿಕೆ ಮೇಲೆ ಚರ್ಚೆಗೆ ಬರಲಿ.

ಮೊನ್ನೆ 16ರಂದು ಕಾಂಗ್ರೆಸ್‌ ಪಕ್ಷ “ನಾ ನಾಯಕಿ” ಸಮಾವೇಶವನ್ನು ಏರ್ಪಾಡು ಮಾಡಿತ್ತು, ಇದಕ್ಕೆ ಪ್ರಿಯಾಂಕ ಗಾಂಧಿ ಅವರು ಆಗಮಿಸಿದ್ದರು. ನಾವು ಪ್ರತೀ ಕುಟುಂಬದ ಯಜಮಾನಿಗೆ 2000 ರೂ. ನೀಡುತ್ತೇವೆ ಎಂಬ ಭರವಸೆ ನೀಡಿದ ಮೇಲೆ ಬಿಜೆಪಿಯವರು ಜಾಹೀರಾತು ನೀಡಿ, ಮಹಿಳೆಯರಿಗೆ ಅದನ್ನು ಮಾಡುತ್ತೇವೆ, ಇದನ್ನು ಮಾಡುತ್ತೇವೆ ಎಂದು ಪುಂಕಾನುಪುಂಕವಾಗಿ ಸುಳ್ಳು ಆಶ್ವಾಸನೆ ನೀಡಿದ್ದಾರೆ. ಅಧಿಕಾರಕ್ಕೆ ಬಂದು ಮೂರುವರೆ ವರ್ಷವಾಯಿತಲ್ಲ ಬೊಮ್ಮಾಯಿ ಅವರು ಯಾಕೆ ಇಷ್ಟು ದಿನ ಮಹಿಳೆಯರಿಗಾಗಿ ಒಂದು ಯೋಜನೆಯನ್ನು ಜಾರಿ ಮಾಡಿಲ್ಲ? ನಿಮ್ಮ ಕೈಹಿಡಿದುಕೊಂಡವರು ಯಾರು ಬೊಮ್ಮಾಯಿ?

ನಾವು ಕೊಟ್ಟ ಮಾತಿನಂತೆ ನಡೆದುಕೊಂಡರೆ, ಬಿಜೆಪಿ ವಚನ ಭ್ರಷ್ಟರು. ರಾಜ್ಯದ ಪ್ರತೀ ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ನೀಡುವ ಭರವಸೆಗೆ ನಾನು, ಡಿ.ಕೆ ಶಿವಕುಮಾರ್‌ ಸಹಿ ಮಾಡಿದ್ದೇವೆ. ಇದನ್ನು ಅಕ್ಷರಶಃ ಜಾರಿಗೆ ತಂದೇ ತರುತ್ತೇವೆ. ಪ್ರತೀ ಮನೆಗೆ ಬಂದು ಮನೆಯ ಯಜಮಾನಿಯನ್ನು ಗುರುತಿಸಿ ಅವರಿಗೆ 2000 ರೂ. ತಿಂಗಳಿಗೆ ನೀಡುವ ಕೆಲಸ ಮಾಡುತ್ತೇವೆ. ಈ ಹಿಂದೆ ಗರ್ಭೀಣಿ ಮತ್ತು ಬಾಣಂತಿಯರಿಗೆ ಮಾತೃಪೂರ್ಣ ಯೋಜನೆ ಅಡಿ ಪೌಷ್ಟಿಕಾಂಶಯುಕ್ತ ಬಿಸಿಯೂಟ ನೀಡುತ್ತೇವೆ ಎಂದು ಹೇಳಿ, ಅದನ್ನು ಜಾರಿ ಮಾಡಿದ್ದೆವು. ಈಗ ಅದು ಬಂದ್‌ ಆಗಿದೆ.

ರಾಜ್ಯದ ಎಲ್ಲಾ ಮನೆಗಳಿಗೆ 200 ಯುನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡುವ ಘೋಷಣೆ ಮಾಡಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ತೇವೆ. ಇದೇ ಬಿಜೆಪಿ ಪಕ್ಷ ಕೃಷ್ಣಾ ಮೇಲ್ದಂಡೆಯ 3ನೇ ಹಂತದ ಕೆಲಸವನ್ನು ಪೂರ್ಣಗೊಳಿಸುತ್ತೇವೆ ಮತ್ತು 5 ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂಪಾಯಿಯನ್ನು ನೀರಾವರಿಗೆ ಖರ್ಚು ಮಾಡುವುದಾಗಿ ಹೇಳಿತ್ತು. ಕಳೆದ ಮೂರುವರೆ ವರ್ಷಗಳಲ್ಲಿ 45,000 ಕೋಟಿ ರೂ. ಮಾತ್ರ ಖರ್ಚು ಮಾಡಿದ್ದಾರೆ. ಇದೇ ಕಾರಣಕ್ಕೆ ನಾವು ಬಿಜಾಪುರದಲ್ಲಿ ಸಮಾವೇಶ ಮಾಡಿ, ನಾವು ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 2 ಲಕ್ಷ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಬಿಜಾಪುರದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ, ಪುನರ್ವಸತಿ ಕಲ್ಪಿಸಿ ಕೊಟ್ಟಿಲ್ಲ. ನಾವು ಅಧಿಕಾರಕ್ಕೆ ಬಂದರೆ ಎಲ್ಲ ಸಂತ್ರಸ್ತರಿಗೆ ಪರಿಹಾರ ನೀಡಿ, ಪುನರ್ವಸತಿ ಕಾರ್ಯ ಮಾಡುತ್ತೇವೆ. ತುಂಗಭದ್ರಾ ಅಣೆಕಟ್ಟಿನಲ್ಲಿ 37 ಟಿಎಂಸಿ ನೀರು ಶೇಖರಣೆಯಾಗುವಷ್ಟು ಹೂಳು ತುಂಬಿದೆ, ನಮ್ಮ ಪಾಲಿನ 200 ಟಿಎಂಸಿ ನೀರು ಆಂದ್ರಪ್ರದೇಶಕ್ಕೆ ಹೋಗುತ್ತಿದೆ. ಇದನ್ನು ಸರಿಪಡಿಸಲು ತುಂಗಭದ್ರಾ ಅಣೆಕಟ್ಟಿಗೆ ಸಮನಾಂತರವಾಗಿ ಇನ್ನೊಂದು ಅಣೆಕಟ್ಟು ನಿರ್ಮಾಣ ಮಾಡುತ್ತೇವೆ. ಹೀಗೆ ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ಮೇಕೆದಾಟು ಎಲ್ಲಾ ನೀರಾವರಿಗೆ ಯೋಜನೆಗಳನ್ನು 2 ಲಕ್ಷ ಕೋಟಿ ಹಣದಲ್ಲಿ ಪೂರ್ಣಗೊಳಿಸುತ್ತೇವೆ. 2012ರಲ್ಲಿ ನಾವು ಹೊಸಪೇಟೆಯಿಂದ ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಿ, ನಾವು ಅಧಿಕಾರಕ್ಕೆ ಬಂದರೆ ನೀರಾವರಿಗೆ 50,000 ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಹೇಳಿದ್ದೆವು. ಅಧಿಕಾರಕ್ಕೆ ಬಂದ ನಂತರ 50,000 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿದ್ದೇವೆ.

ನರೇಂದ್ರ ಮೋದಿ ಅವರು 2016ರಲ್ಲಿ ಈ ದೇಶದ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ನೀಡಿದ್ದರು. 2023 ಬಂದಿದೆ, ಈಗಲಾದರೂ ರೈತರ ಆದಾಯ ದುಪ್ಪಟ್ಟಾಗಿದೆಯಾ? ಇದರ ಬದಲು ರೈತರು ಕೃಷಿಗೆ ಹಾಕುವ ಬಂಡವಾಳದ ಹಣ ದುಪ್ಪಟ್ಟಾಗಿದೆ. ರಸಗೊಬ್ಬರ, ಕಳೆನಾಶಕ, ಕೀಟನಾಶಕ, ಕೃಷಿ ಯಂತ್ರೋಪಕರಣಗಳ ಬೆಲೆ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಮಾತನ್ನು ಕೇಳಿ ಎಪಿಎಂಸಿ ಮಸೂದೆಗೆ ತಿದ್ದುಪಡಿ ಮಸೂದೆ ಜಾರಿ ಮಾಡಲಾಯಿತು. ಕೇಂದ್ರ ಸರ್ಕಾರ ಇದನ್ನು ವಾಪಾಸು ಪಡೆದರೂ ಕೂಡ ರಾಜ್ಯ ಸರ್ಕಾರ ಇನ್ನೂ ವಾಪಸು ಪಡೆದಿಲ್ಲ. ನಾವು ಅಧಿಕಾರಕ್ಕೆ ಬಂದ ತಕ್ಷಣ ಈ ತಿದ್ದುಪಡಿ ಮಸೂದೆಯನ್ನು ವಾಪಾಸು ಪಡೆದು ಹಿಂದಿನ ಪದ್ಧತಿಯನ್ನು ಮುಂದುವರೆಸುತ್ತೇವೆ.

2014ರಲ್ಲಿ ಕಬ್ಬಿನ ಬೆಲೆ ಬಿದ್ದುಹೋಗಿತ್ತು. ಒಂದು ಟನ್‌ ಗೆ 350 ರೂ. ಅಂತೆ 1800 ಕೋಟಿ ಹಣವನ್ನು ಸರ್ಕಾರದ ಖಜಾನೆಯಿಂದ ನಾವು ನೀಡಿದ್ದೆವು. ಈಗಲೂ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ನರೇಂದ್ರ ಮೋದಿ ಅಥವಾ ಬೊಮ್ಮಾಯಿ ಒಂದು ರೂಪಾಯಿ ಆದ್ರೂ ಕೊಟ್ಟಿದ್ದಾರ? ಇದೇನಾ ರೈತರ ಆದಾಯ ದುಪ್ಪಟ್ಟು ಮಾಡುವ ರೀತಿ? ನಾನು 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆ, ಈಗ 5 ಕೆ.ಜಿ ಮಾಡಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ 10 ಕೆ.ಜಿ ಉಚಿತವಾಗಿ ಅಕ್ಕಿಯನ್ನು ನೀಡುತ್ತೇವೆ.

ರಾಜ್ಯದ ಮಹಿಳೆಯರು, ಯುವಜನರು, ರೈತರು ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆದು ಕಾಂಗ್ರೆಸನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು. ನಾವು ಅಧಿಕಾರಕ್ಕೆ ಬಂದರೆ ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ರೈತರಿಗೆ ನ್ಯಾಯಸಮ್ಮತವಾದ ಪರಿಹಾರವನ್ನು ನೀಡುತ್ತೇವೆ. ಈ ಬಿಜೆಪಿಯವರ ಯೋಗ್ಯತೆಗೆ ಮೊನ್ನೆ ಮೊನ್ನೆವರೆಗೂ ಒಂದು ನೋಟಿಫಿಕೇಷನ್‌ ಹೊರಡಿಸಲು ಸಾಧ್ಯವಾಗಿರಲಿಲ್ಲ.

ನಾವು ಅಧಿಕಾರಕ್ಕೆ ಬಂದರೆ ಬ್ಯಾಂಕು ಮತ್ತು ಸಹಕಾರಿ ಬ್ಯಾಂಕುಗಳಲ್ಲಿ 1 ಲಕ್ಷದ ವರೆಗೆ ಸಾಲ ಮನ್ನಾ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಒಂದು ರೂಪಾಯಿಯಾದ್ರೂ ಮನ್ನಾ ಮಾಡಿದ್ರಾ? ನಾನು ಚುನಾವಣೆಗೆ ಮೊದಲು ಭರವಸೆ ನೀಡದಿದ್ದರೂ ರೈತರು ಕಷ್ಟದಲ್ಲಿದ್ದಾರೆ ಎಂಬ ಕಾರಣಕ್ಕಾಗಿ 50,000 ವರೆಗಿನ ಸಹಕಾರಿ ಬ್ಯಾಂಕುಗಳ 8,165 ಕೋಟಿ ಸಾಲವನ್ನು ಮನ್ನಾ ಮಾಡಿದ್ದೆ. ಮನಮೋಹನ್‌ ಸಿಂಗ್‌ ಅವರು 78,000 ಕೋಟಿ ರೂ. ರೈತರ ಸಾಲವನ್ನು ಮನ್ನಾ ಮಾಡಿದ್ದರು. ನರೇಂದ್ರ ಮೋದಿ ಅವರು 14 ಲಕ್ಷ ಕೋಟಿ ಅಂಬಾನಿ, ಅದಾನಿಯಂತಹ ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ನಮ್ಮ ಪಕ್ಷ ಬಡವರು, ಕಾರ್ಮಿಕರ, ರೈತರ ಪರವಾಗಿತ್ತು.

ಇಂದು ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬೆಲೆ ಗಗನಕ್ಕೆ ಹೋಗಿದೆ. ಮನಮೋಹನ್‌ ಸಿಂಗ್‌ ಅವರ ಸರ್ಕಾರ ಇದ್ದಾಗ ಡೀಸೆಲ್‌ ಬೆಲೆ 54 ರೂ. ಇತ್ತು, ಇಂದು 96 ರೂ. ಆಗಿದೆ. ಪೆಟ್ರೋಲ್‌ ಬೆಲೆ 76 ರೂ. ಇತ್ತು, ಇಂದು 102 ರೂ. ಆಗಿದೆ. ಗ್ಯಾಸ್‌ ಬೆಲೆ 414 ರೂ. ಇತ್ತು, ಈಗದು 1150 ರೂ. ಆಗಿದೆ. ಮೋದಿ ಅವರು ಅಚ್ಚೇದಿನ್‌ ಆಯೇಗಾ ಎಂದು ಹೇಳಿ ಜನರನ್ನು ಲೂಟಿ ಮಾಡಿದ್ದಾರೆ.

ಬೊಮ್ಮಾಯಿ ಅವರ ಸರ್ಕಾರ 40% ಕಮಿಷನ್‌ ಸರ್ಕಾರ. ಸಬ್‌ ಇನ್ಸ್‌ ಪೆಕ್ಟರ್‌ ನೇಮಕಾತಿಯಲ್ಲಿ ಒಬ್ಬೊಬ್ಬ ಅಭ್ಯರ್ಥಿಯಿಂದ 70, 80 ಲಕ್ಷದವರೆಗೆ ಲಂಚ ತಿಂದಿದ್ದಾರೆ. ನೇಮಕಾತಿ ವಿಭಾಗದ ಎಡಿಜಿಪಿ ಅಧಿಕಾರಿಯೊಬ್ಬರು ಜೈಲು ಸೇರಿದ್ದಾರೆ. ಇವರ ಜೊತೆ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿದ್ದ ಮಂತ್ರಿಗಳು ಯಾರಾದರೂ ಜೈಲು ಸೇರಿದ್ದಾರ? ನಮ್ಮ ಪಕ್ಷದ ನಾಯಕರಾದ ಕಾಶಪ್ಪನವರು ನಿರಾಣಿಯವರ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಂದು ತನಿಖಾ ಸಮಿತಿಯನ್ನು ರಚನೆ ಮಾಡಿ, ಯಾರ ಮೇಲೆಲ್ಲಾ ಆರೋಪಗಳಿವೆ ಅದನ್ನು ತನಿಖೆ ಮಾಡಿಸಿ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ.

ದುರಾಡಳಿತದಿಂದ ಗಬ್ಬೆದ್ದು ಹೋಗಿರುವ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆದು ಭ್ರಷ್ಟಾಚಾರ ರಹಿತವಾದ, ಪಾರದರ್ಶಕ ಆಡಳಿತ ನೀಡಲು ರಾಜ್ಯದ ಜನ ಕಾಂಗ್ರೆಸ್‌ ಗೆ ಬೆಂಬಲ ನೀಡಬೇಕು ಎಂದು ಈ ಮೂಲಕ ಮನವಿ ಮಾಡುತ್ತೇನೆ.

Share News

About BigTv News

Check Also

Featured Video Play Icon

ಯುವತಿ ಕೊಲೆಗೆ ಪ್ರೇಮ ಪ್ರಕರಣವೇ ಕಾರಣ: ಕಮೀಷನರ್ ರೇಣುಕಾ ಸುಕುಮಾರ್..!

ಹುಬ್ಬಳ್ಳಿ: ಬಿವ್ಹಿಬಿ ‌ಕಾಲೇಜು ಕ್ಯಾಂಪಸ್ ನಲ್ಲಿ ಯುವತಿ ಕೊಲೆ ಪ್ರಕರಣದ ಕಾರಣವನ್ನು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ‌ಸುಕುಮಾರ ಬಿಚ್ಚಿಟ್ಟಿದ್ದಾರೆ. …

Leave a Reply

Your email address will not be published. Required fields are marked *

You cannot copy content of this page