ಹುಬ್ಬಳ್ಳಿ: ಸಹಕಾರಿ ಭೀಷ್ಮ ಕೆ.ಎಚ್.ಪಾಟೀಲ್ ಅವರ ಪ್ರತಿಮೆಯನ್ನು ರಾತ್ರೋರಾತ್ರಿ ತೆರವು ಗೊಳಿಸಿದ್ದಕ್ಕೆ ಪ್ರತಿಷ್ಠಾನದ ಪ್ರಮುಖರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಈಜುಕೋಳದ ಮುಂಭಾಗದಲ್ಲಿ ಕಳೆದ 31 ವರ್ಷಗಳ ಹಿಂದೆ ಪ್ರತಿಷ್ಠಾಪನೆ ಮಾಡಿದ್ದ ಕೆ.ಹೆಚ್.ಪಾಟೀಲ್ ಅವರ ಪ್ರತಿಮೆಯನ್ನು ತೆರವು ಮಾಡಿದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪ್ರತಿಷ್ಠಾನದ ಗಮನಕ್ಕೆ ತರದೇ ರಾತ್ರಿ ತೆರವುಗೊಳಿಸಿ ಇಂದಿರಾಗಾಜಿನ ಮನೆಯಲ್ಲಿ ಇರಿಸಿದ್ದ ವಿಷಯ ತಿಳಿದ ಕಾಂಗ್ರೆಸ್ ನಾಯಕರು ಹಾಗೂ ಪ್ರತಿಷ್ಠಾನದ ಪ್ರಮುಖರು ಸ್ಥಳಕ್ಕೆ ಆಗಮಿಸಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಮಾಜಿ ಸಚಿವ ಎ.ಎಮ್.ಹಿಂಡಸಗೇರಿ ಮಾತನಾಡಿ, ಅಭಿವೃದ್ಧಿ ವಿಚಾರಕ್ಕೆ ಎಂದೂ ವಿರೋಧ ವ್ಯಕ್ತಪಡಿಸಿಲ್ಲ, ಕಾಮಗಾರಿಗೆ ಪ್ರತಿಮೆ ಒಂದು ವೇಳೆ ಅಡಚಣೆ ಆಗಿದ್ದರೇ ನಮಗೆ ತಿಳಿಸಿದರೇ ನಾವೇ ವಿಧಿ ವಿಧಾನದ ಮೂಲಕ ತೆರವುಗೊಳಿಸುತ್ತಿದ್ದೇವು. ಆದರೆ ಕಳ್ಳರಂತೆ ರಾತ್ರೋರಾತ್ರಿ ಸಹಕಾರ ಸಹಕಾರಿ ಧುರೀಣ ಕೆ.ಎಚ್.ಪಾಟೀಲ್ ರ ಪ್ರತಿಮೆಯನ್ನು ತೆರವು ಗೊಳಿಸುವ ಮೂಲಕ ಸಹಕಾರಿ ರಂಗಕ್ಕೆ ಅವಮಾನ ಮಾಡಿದ್ದಾರೆ. ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಮಹಾನ್ ವ್ಯಕ್ತಿಗಳ ಇತಿಹಾಸ ಸಾಧನೆ ಅರಿಯದೇ ಹೊಲಸು ರಾಜಕಾರಣ ಮಾಡುತ್ತಿರುವುದು ವಿಪರ್ಯಾಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ವಸಂತ ಲದ್ವಾ ಮಾತನಾಡಿ, ಇದು ರಾಜಕೀಯ ದುರುದ್ದೇಶದಿಂದ ಮಾಡಿರುವ ಕೃತ್ಯವಾಗಿದೆ. ಕಾಂಗ್ರೆಸ್ ಪಕ್ಷ ಹಾಗೂ ಸಹಕಾರಿಗಳು ಉಗ್ರ ಹೋರಾಟದ ಮೂಲಕ ಖಂಡಿಸುತ್ತೇವೆ. ಕಾನೂನು ಬಾಹಿರವಾಗಿ ತೆರವು ಗೊಳಿಸಿರುವ ಅಧಿಕಾರಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಶೀಘ್ರದಲ್ಲೇ ಈ ಬಗ್ಗೆ ಚರ್ಚಿಸಿ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶಾಸಕಿ ಕುಸುಮಾವತಿ, ಅರವಿಂದ ಕಟಗಿ ಮಾತನಾಡಿ, ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಆ ಬಳಿಕ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸಹಾಯಕ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಆಧಿಕಾರಿ ಮಾತನಾಡಿ ಕಳೆದ ಏಳು ತಿಂಗಳ ಹಿಂದೆ ಈ ಕುರಿತು ಸಭೆ ಆಗಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮೇಯರ್ ಈರೇಶ ಅಂಚಟಗೇರಿ, ಪಾಲಿಕೆ ಆಯುಕ್ತ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೇರಿದಂತೆ ಹಲವರು ಭಾಗಿಯಾಗಿದ್ದ ಸಭೆಯಲ್ಲಿ ಮೂರ್ತಿ ತೆರವಿಗೆ ನಿರ್ಧಾರ ಮಾಡಲಾಗಿದ್ದು ಅದರಂತೆ ಮೂರ್ತಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಉತ್ತರಿಸಿದರು. ಇದಕ್ಕೆ ಮತ್ತಷ್ಟು ಕೇರಳಿದ ನಾಯಕರು ತೆರವು ಗೊಳಿಸುವ ಮುನ್ನ ನಮ್ಮ ಗಮನಕ್ಕೆ ಯಾಕೆ ತರಲಿಲ್ಲ. ನೀವು ಬಿಜೆಪಿ ಏಜೆಂಟ್ ರಂತೆ ವರ್ತಿಸುತ್ತಿದ್ದೀರಿ ಎಂದು ಹರಿಹಾಯ್ದರು.
ಸಭೆಯ ನಡಾವಳಿ ಪ್ರತಿಯನ್ನು ನೀಡಬೇಕು. ಜೊತೆಗೆ ಪಾಲಿಕೆ ಆಯುಕ್ತರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಆದರೆ ಪಾಲಿಕೆ ಆಯುಕ್ತರು ತರಭೇತಿ ನಿಮಿತ್ತ ಬೇರೆಡೆಗೆ ಹೋಗಿರುವ ವಿಷಯ ತಿಳಿದು ಹೋರಾಟದ ನಿರ್ಧಾರಕ್ಕೆ ಪ್ರತಿಷ್ಠಾನದ ಮುಖಂಡರು ಒಮ್ಮತಕ್ಕೆ ಬಂದರು.