ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಟ್ಟೋಳಿ ಗ್ರಾಮದಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ 32 ಎಕರೆ ಕಾಫಿ ತೋಟಕ್ಕೆ ವಿಷಕಾರಿ ರಾಸಾಯನಿಕ ಸಿಂಪಡಿಸಿರುವ ಆರೋಪ ಕೇಳಿಬಂದಿದೆ. ಇದರಿಂದ 2,000ಕ್ಕೂ ಹೆಚ್ಚು ಕಾಫಿ ಗಿಡಗಳು, ಕಾಳುಮೆಣಸಿನ ಬಳ್ಳಿಗಳು ಹಾಗೂ ನೆರಳಿನ ಮರಗಳು ಒಣಗುತ್ತಿದ್ದು, ₹15 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಸುಪ್ರೀಂ ಕೋರ್ಟ್ ವಕೀಲ ಎನ್. ರವೀಂದ್ರನಾಥ ಕಾಮತ್ ಅವರಿಗೆ ಸೇರಿದ ಈ ತೋಟದ ಹಿಂದಿನ ವ್ಯವಸ್ಥಾಪಕ ಹಾಗೂ ಇತರ ಮೂವರು ಈ ಕೃತ್ಯ ಎಸಗಿದ್ದಾರೆ ಎಂದು ಮಾಲೀಕರು ಆರೋಪಿಸಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಣಕಾಸು ಅವ್ಯವಹಾರದ ಹಿನ್ನೆಲೆಯಲ್ಲಿ ಹಿಂದಿನ ವ್ಯವಸ್ಥಾಪಕನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಹಾನಿಗೊಳಗಾದ ಗಿಡಗಳ ಎಲೆಗಳ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ವರದಿ ಬಂದ ಬಳಿಕ ಯಾವ ರಾಸಾಯನಿಕ ಸಿಂಪಡಿಸಲಾಗಿದೆ ಎಂಬುದು ತಿಳಿಯಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

