ಬೆಂಗಳೂರು : ನೀರಾವರಿ ಇಲಾಖೆಯ ಹೊಸ ಆಯ್ಕೆ ಪಟ್ಟಿಯಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಹಲವು ಅಭ್ಯರ್ಥಿಗಳು ನಕಲಿ ದಾಖಲೆ ಸಲ್ಲಿಸಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಇದೇ ವರ್ಷ ಜೂನ್ 27 ರಂದು ಹೊಸದಾಗಿ 182 ಅಭ್ಯರ್ಥಿಗಳ ತಾತ್ಕಾಲಿಕ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿತ್ತು. ಆಯ್ಕೆಯಾದ 182 ಅಭ್ಯರ್ಥಿಗಳಲ್ಲಿ 62 ಜನರು ನಕಲಿ ಅಂಕಪಟ್ಟಿಯನ್ನು ನೀಡಿದ್ದಾರೆ ಎಂದು ಕೆಲ ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ.
2022ರ ಅಕ್ಟೋಬರ್ನಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಸಿ ವೃಂದದ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ಲಾಗ್ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ದ್ವಿತೀಯ ಪಿಯುಸಿ, ಸಿಬಿಎಸ್ಸಿ ಮತ್ತು ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಈ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಯಾವುದೇ ಪರೀಕ್ಷೆ ಇರಲಿಲ್ಲ. ಈ ಹುದ್ದೆಗೆ ನಕಲಿ ಅಂಕಪಟ್ಟಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಳ್ಳಲು ಯತ್ನಿಸಲಾಗಿತ್ತು.
ಈ 62 ಜನ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಯ ನೋಂದಣಿ ಸಂಖ್ಯೆಯನ್ನು ತಿದ್ದಿದ್ದಾರೆ. ಹೆಚ್ಚಿನ ಅಂಕ ಪಡೆದವರ ಅಂಕಪಟ್ಟಿ ಪಡೆದು, ಅದನ್ನು ತಮ್ಮ ಅಂಕಪಟ್ಟಿಗೆ ಅಂಟಿಸಿಕೊಂಡಿದ್ದಾರೆ. ಬಳಿಕ ಅರ್ಜಿ ಸಲ್ಲಿಸಿದ್ದಾರೆ. ಅಧಿಕ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳು ನೌಕರಿ ಗಿಟ್ಟಿಸಿಕೊಂಡಿದ್ದಾರೆ. ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಅಂಕಪಟ್ಟಿಗೆ ನೀಡಿದ ಶಹಾಪುರ ತಾಲೂಕಿನ ಹಾರಣಗೇರಾ ಗ್ರಾಮದ ರವಿಕುಮಾರ ಎಂಬುವವರಿಗೆ ಸಿಸಿಬಿ ನೋಟಿಸ್ ನೀಡಿದೆ.
ರವಿಕುಮಾರ್ ಪಿಯುಸಿಯಲ್ಲಿ ಫೇಲ್ ಆಗಿದ್ದಾನೆ. ಆದರೆ, ರವಿಕುಮಾರ್, ಕವಿತಾ ಕಾಂಬ್ಳೆ ಎಂಬುವರ ಪಿಯುಸಿ ನೊಂದಣಿ ಸಂಖ್ಯೆ ಬಳಸಿಕೊಂಡು, ಕೆಲಸ ಗಿಟ್ಟಿಸಿಕೊಂಡಿದ್ದಾನೆ ಎಂದು ತಿಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

