ಹಾಸನ: ಜಿಲ್ಲೆಯಲ್ಲಿ ಬೆಳೆ ವಿಮೆ ಕಟ್ಟಿರುವ ರೈತರಿಗೆ ಯಾವುದೇ ರೀತಿಯಲ್ಲಿ ಮೋಸ ಆಗದಂತೆ ನಿಗಾವಹಿಸಲು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಓರಿಯೆಂಟಲ್ ವಿಮಾ ಕಂಪನಿಯ ಪ್ರತಿನಿಧಿಗಳು, ರೈತರಿಂದ ಲಂಚ ಕೇಳುತ್ತಿರುವ ಬಗ್ಗೆ ದೂರುಗಳು ಬಂದಿವೆ. ಜೊತೆಗೆ ರೈತರಿಗೆ ಬೆದರಿಕೆ ಹಾಕಿ, ಇಳುವರಿಯನ್ನು ನಾವು ಹೇಳಿದಂತೆ ಬರೆದುಕೊಡಿ ಎಂದು ಕೇಳುತ್ತಿರುವುದು ಕಂಡುಬಂದಿದೆ. ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ವಿಮಾ ಏಜೆನ್ಸಿಯ ಜಿಲ್ಲಾ ಸಮನ್ವಯ ಅಧಿಕಾರಿಗೆ ಸೂಚಿಸಿದರು.
ವಿಮಾ ಏಜೆನ್ಸಿಯವರು ಯಾವ ಗ್ರಾಮಗಳಿಗೆ, ಯಾವ ದಿನದಂದು, ಯಾರು ಕರ್ತವ್ಯ ನಿರ್ವಹಿಸಲು ಹೋಗುತ್ತಿದ್ದಾರೆ ಎಂಬ ಮಾಹಿತಿಯನ್ನು ತಹಶೀಲ್ದಾರ್‌ಗಳಿಗೆ ನೀಡುವಂತೆ ನಿರ್ದೇಶನ ನೀಡಿದರು.
ಅಧಿಕಾರಿಗಳು ರೈತರ ತಾಕುಗಳಿಗೆ ಭೇಟಿ ನೀಡಿ, ಪರಿಶೀಲಿಸಬೇಕು. ಸ್ಥಳೀಯ ಸಮಸ್ಯೆಗಳನ್ನು ರೈತರು ಹೇಳುತ್ತಾರೆ. ಮುಂಗಾರು ಬೆಳೆಯ ಬಾಕಿ ಇರುವ ಬೆಳೆ ಕಟಾವು ಪ್ರಯೋಗಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ವರದಿಯಾದ ಜನನ-ಮರಣಗಳ ಬಗ್ಗೆ ಗಮನಹರಿಸಿ ಸಕಾಲದಲ್ಲಿ ನೋಂದಣಿ ಮಾಡುವ ಮೂಲಕ ಶೇ 100 ರಷ್ಟು ಗುರಿ ಸಾಧಿಸಬೇಕು. 30 ದಿನದ ನಂತರ ಹಾಗೂ ಒಂದು ವರ್ಷದೊಳಿನ ಪ್ರಕರಣಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ವಿವರಗಳನ್ನು ಖಚಿತಪಡಿಸಿಕೊಂಡು ನೋಂದಣಿ ಮಾಡಿ ಪ್ರಮಾಣಪತ್ರ ನೀಡಬಹುದು. ಒಂದು ವರ್ಷದ ನಂತರ ಕೋರ್ಟ್ ಆದೇಶ ಪಡೆದು ನೋಂದಣಿ ಪ್ರಮಾಣ ಪತ್ರ ನೀಡಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಶಾಜಿಯಾ, ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಮಂಗಳಾ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

