Breaking News

ಯಾದಗಿರಿಯಲ್ಲಿ ನೂತನ ಪೊಲೀಸ್ ಠಾಣೆ, ವಸತಿ ಗೃಹಗಳನ್ನು ಉದ್ಘಾಟಿಸಿದ ಸಚಿವ ಜಿ.ಪರಮೇಶ್ವರ್

ಯಾದಗಿರಿ : ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳನ್ನು ಆಧುನಿಕರಣಗೊಳಿಸಲು ಸರಕಾರ ಕ್ರಮ ಕೈಗೊಂಡಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.
ನಗರದಲ್ಲಿಂದು ಜಿಲ್ಲಾ ಪೊಲೀಸ್ ಇಲಾಖೆ, ರಾಜ್ಯ ಪೊಲೀಸ್ ಇಲಾಖೆ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, 17 ಕೋಟಿ ರೂ.ವೆಚ್ಚದ ಪೊಲೀಸ್ ವಸತಿ ಗೃಹಗಳು ಹಾಗೂ 2.12 ಕೋಟಿ ರೂ. ವೆಚ್ಚದ ನಗರ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕತೆಗೆ ತಕ್ಕಂತೆ ರಾಜ್ಯದಲ್ಲಿರುವ ಸುಮಾರು 1,000 ಪೋಲಿಸ್ ಠಾಣೆಗಳನ್ನು ಆಧುನಿಕರಣ ಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ವಿವಿಧ ಪೊಲೀಸ್ ಠಾಣೆಗಳ ಮೇಲೆ ಬೆಂಗಳೂರಿನಿಂದಲೇ ನಿಗಾ ಇಡುವಂತಹ ವ್ಯವಸ್ಥೆ ಜೊತೆಗೆ ಎಲ್ಲ ಪೊಲೀಸ್ ಠಾಣೆಗಳನ್ನು ತಾಂತ್ರಿಕವಾಗಿ ಅತ್ಯಾಧುನಿಕರಣಗೊಳಿಸಲು ಸರಕಾರ ಹಾಗೂ ಮಾನ್ಯ ಮುಖ್ಯಮಂತ್ರಿಗಳು ದೂರ ದೃಷ್ಟಿ ಹೊಂದಿದ್ದಾರೆ ಎಂದು ಹೇಳಿದರು.
ಪೊಲೀಸ್ ಇಲಾಖೆ ಹಾಗೂ ಸಿಬ್ಬಂದಿಗಳ ಕರ್ತವ್ಯವು ಅತ್ಯಂತ ಸೂಕ್ಷ್ಮವಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದಲೇ ಅಂತ್ಯ ಮಾಡಲಾಗುತ್ತದೆ. ಇದಕ್ಕಾಗಿ ಪೊಲೀಸ್ ಇಲಾಖೆ ಇನ್ನಷ್ಟು ಬಲಗೊಳಿಸಲು ರಾಜ್ಯಾದ್ಯಂತ ಒಟ್ಟು 1,000 ಸಬ್ ಇನ್ ಸ್ಪೆಕ್ಟರ್ ಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಹಗರಣದಿಂದಾಗಿ ನೆನೆಗುದಿಗೆ ಬಿದ್ದಿದ್ದ 402 ಸಬ್ ಇನ್ ಸ್ಪೆಕ್ಟರ್ ಗಳ ನೇಮಕಾತಿಗೂ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪೋಲಿಸರು ಜನಸ್ನೇಹಿಗಳಾಗಿ ಕಾನೂನಿನ ಅನ್ವಯ ಕಾರ್ಯನಿರ್ವಹಿಸಬೇಕು. ಕಷ್ಟದಲ್ಲಿ ಬರುವ ಸಾರ್ವಜನಿಕರಿಗೆ ಸ್ನೇಹಿತರಾಗಿ ವರ್ತಿಸಬೇಕು. ವಿಶೇಷವಾಗಿ ಹೆಣ್ಣು ಮಕ್ಕಳನ್ನು ಗೌರವಾದಿಂದ ನೋಡಿಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಾರ್ವಜನಿಕರು ಕೂಡ 24 ಗಂಟೆಗಳ ಕಾಲ ದಿನನಿತ್ಯ ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೂ ಗೌರವ ನೀಡುವಂತೆ ಸಲಹೆ ನೀಡಿದರು.
ಯಾದಗಿರಿ ನಗರ ಪೊಲೀಸ್ ಠಾಣೆ ಉನ್ನತೀಕರಿಸುವ ಬೇಡಿಕೆ ಇದ್ದು, ಅದನ್ನು ಈಡೇರಿಸಲಾಗುವುದು. ಅದರಂತೆ ಖಾನಾಪುರ್ ಪೊಲೀಸ್ ಠಾಣೆ, ಗುರುಮಿಟ್ಕಲ್ ನೂತನ ಪೊಲೀಸ್ ಠಾಣೆ ಸ್ಥಾಪನೆಗೆ ಸಂಬಂಧಪಟ್ಟಂತೆ ನಿಯಮಾವಳಿಯನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಕ್ಕೇರ ಔಟ್ ಪೋಸ್ಟ್ ಪೋಲೀಸ್ ಠಾಣೆ ಉನ್ನತಿಕರಣಗೊಳಿಸುವ ಬಗ್ಗೆ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಕ್ರಮ ಕೈಗೊಳ್ಳಲಾಗುವುದು. ಈ ಕುರಿತಂತೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪೊಲೀಸ್ ಪರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಶರಣಗೌಡ ಕಂದಕೂರು, ಸುರಪುರ ಶಾಸಕ ರಾಜಾ ವೇಣುಗೋಪಾಲ್ ನಾಯಕ್, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬುರಾವ್ ಚಿಂಚನಸೂರ್, ನಗರಸಭೆ ಅಧ್ಯಕ್ಷರಾದ ಲಲಿತ ಅನಪುರ್, ನರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ವಿನಾಯಕ್ ಪಾಟೀಲ್, ಕಲಬುರಗಿ ಈಶಾನ್ಯ ವಲಯ ಉಪ- ಪೊಲೀಸ್ ಮಹಾನಿರೀಕ್ಷಕರಾದ ಅಜಯ್ ಹಿಲೋರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ ಶಂಕರ್ ಸೇರಿದಂತೆ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *