ಬೆಂಗಳೂರು: ಚಾಲಾಕಿ ಕಳ್ಳರು, ಖದೀಮರು ಮತ್ತು ಕ್ರಿಮಿನಲ್ ಗಳು ಎಂತೆಂಥಾ ಖತರ್ನಾಕ್ ಐಡಿಯಾ ಮಾಡಿ ಜನರನ್ನ ಯಾಮಾರಿಸ್ತಾರೆ ಅಂದ್ರೆ, ಇಲ್ಲೊಂದು ಪ್ರಕರಣದಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ, ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್‌ಐ ಸೇರಿ ನಾಲ್ವರು ಆರೋಪಿಗಳು ಬೆಂಗಳೂರಲ್ಲಿ ಲಾಕ್ ಆಗಿದ್ದಾರೆ.ಬೆಂಗಳೂರಿನ ವಿದ್ಯಾರಣ್ಯಪುರ ಠಾಣೆ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದಾರೆ. ನಕಲಿ ಪಿ.ಎಸ್.ಐ ಮಲ್ಲಿಕಾರ್ಜುನ್ ಸೇರಿ ಒಟ್ಟು ನಾಲ್ವರು, ಐಷಾರಾಮಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಈ ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಂದ 45 ಸಾವಿರ ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ. ನವೀನ್ ಎಂಬ ವ್ಯಕ್ತಿಯ ಮನೆ ಕಳ್ಳತನಕ್ಕೆ ಈ ಗ್ಯಾಂಗ್ ಪ್ರಯತ್ನಿಸಿದ್ದು ಡಿಸೆಂಬರ್ 7ರಂದು ಈ ಚಾಲಾಕಿಗಳು ಪೊಲೀಸ್ ವೇಷ ಧರಿಸಿ ನವೀನ್ ಮನೆಗೆ ಬಂದಿದ್ದರು. ಈ ವೇಳೆ ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯಾ, ನಿನ್ನ ಮನೆ ಶೋಧ ನಡೆಸಬೇಕು ಎಂದು ಬೆದರಿಸಿ ನವೀನ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ, ಖಾತೆಯಲ್ಲಿದ್ದ 87 ಸಾವಿರ ಮತ್ತು ಬೀರುವನಲ್ಲಿದ್ದ 53 ಸಾವಿರ ಪೀಕಿ ಎಸ್ಕೇಪ್ ಆಗಿದ್ದರು. ಈ ಬಗ್ಗೆ ಅನುಮಾನಗೊಂಡ ನವೀನ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

