ಪಟ್ಟಣದ ದೊಡ್ಡಕೆರೆ ಏರಿ ಬಳಿ ನಡೆದಿದ್ದ ಮೂಖಹಳ್ಳಿ ಗ್ರಾಮದ ನಂಜುಂಡಸ್ವಾಮಿ (23) ಎಂಬ ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಈಗ ಭಾರಿ ಟ್ವಿಸ್ಟ್ ಸಿಕ್ಕಿದೆ. ತನ್ನ ಸಹೋದರಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಗೆಳೆಯನನ್ನು ಪಾರ್ಟಿ ಹೆಸರಲ್ಲಿ ಕರೆದೊಯ್ದು ಕತ್ತು ಸೀಳಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿ ಅಜಯ್ ಅಲಿಯಾಸ್ ಪ್ರಮೋದ್ ಮತ್ತು ಮೃತ ನಂಜುಂಡಸ್ವಾಮಿ ಬಾಲ್ಯದ ಗೆಳೆಯರು ಹಾಗೂ ದೂರದ ಸಂಬಂಧಿಗಳು. ಅಜಯ್‌ನ ಸಹೋದರಿಗೆ ಮದುವೆಯಾಗಿದ್ದರೂ ಆಕೆಯ ಜೊತೆ ನಂಜುಂಡಸ್ವಾಮಿ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇವರಿಬ್ಬರು ಖಾಸಗಿ ಕ್ಷಣದಲ್ಲಿದ್ದಾಗ ಆಕೆಯ ಪತಿಯ ಕೈಗೇ ಸಿಕ್ಕಿಬಿದ್ದಿದ್ದರು. ಈ ವಿಷಯ ಅಜಯ್ ಕಿವಿಗೆ ಬಿದ್ದಾಗ ಆತ ಸೇಡಿಗಾಗಿ ಸಂಚು ರೂಪಿಸಿದ್ದನು. ಮಾರ್ಚ್ 1 ರಂದು ಕೆಲಸ ಮುಗಿಸಿ ಮನೆಗೆ ಬಂದಿದ್ದ ನಂಜುಂಡಸ್ವಾಮಿಯನ್ನು ಬಲವಂತವಾಗಿ ಪಾರ್ಟಿಗೆ ಕರೆದೊಯ್ದ ಅಜಯ್, ಕಂಠಪೂರ್ತಿ ಕುಡಿಸಿದ್ದಾನೆ. ಬಳಿಕ ದೊಡ್ಡಕೆರೆ ಏರಿ ಬಳಿ ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದನು. ಕೊಲೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಅಜಯ್‌ನನ್ನು ಗುಂಡ್ಲುಪೇಟೆ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆತ ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರವನ್ನು ಜಪ್ತಿ ಮಾಡಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

