ಕತಾರ್‌ನಿಂದ ಖರ್ಜೂರ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿ, ಉಡುಪಿಯ ವ್ಯಕ್ತಿಯೊಬ್ಬರಿಗೆ ಅವರ ಸ್ವಂತ ಅಳಿಯ ಸೇರಿ ಮೂವರು 15.81 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಬಡಗುಬೆಟ್ಟು ಗ್ರಾಮದ ನಿವಾಸಿ ಇಫ್ರಾನ್ ಅಜೀಜ್ ಅವರು ವಂಚನೆಗೊಳಗಾದವರಾಗಿದ್ದು, ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಅಳಿಯ ಮೊಹಮ್ಮದ್ ಶರ್ಪದ್ದೀನ್, ತಾನು ಪಾಲುದಾರರೊಂದಿಗೆ ವ್ಯಾಪಾರ ನಡೆಸುತ್ತಿರುವುದಾಗಿ ಹೇಳಿ ಮಾವನನ್ನು ನಂಬಿಸಿದ್ದಾನೆ. ಅಳಿಯನ ಮಾತು ನಂಬಿದ ಇಫ್ರಾನ್ ಅಜೀಜ್ ಅವರು ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 15.81 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದರು. ಆದರೆ ಹಣ ಪಡೆದ ಬಳಿಕ ಆರೋಪಿಗಳು ಯಾವುದೇ ವಸ್ತುಗಳನ್ನು ಕಳುಹಿಸದೇ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಮಗೆ ವಂಚನೆ ಆಗಿರುವುದು ತಿಳಿದ ಬಳಿಕ ಇಫ್ರಾನ್ ಅವರು ದೂರು ದಾಖಲಿಸಿದ್ದು, ನ್ಯಾಯಾಲಯದ ನಿರ್ದೇಶನದಂತೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

